Breaking
8 Jul 2026, Wed

ತ್ರಾಸಿ ಬೀಚ್ ಸಮೀಪ ಭೀಕರ ಅಪಘಾತ: ವಿರುದ್ಧ ದಿಕ್ಕಿನಲ್ಲಿ ಬಂದ ಸ್ಕೂಟರ್ ಡಿಕ್ಕಿ, ಇಬ್ಬರು ಸಾವು

ಭಟ್ಕಳ: ರಾಷ್ಟ್ರೀಯ ಹೆದ್ದಾರಿ 66ರ ತ್ರಾಸಿ ಬೀಚ್ ಸಮೀಪದ ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಸ್ಕೂಟರ್ ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಹಾಗೂ ಸ್ಕೂಟರ್ ಸವಾರ ಇಬ್ಬರೂ ಮೃತಪಟ್ಟ ದಾರುಣ ಘಟನೆ ನಡೆದಿದೆ.


ಮೃತರನ್ನು ಭಟ್ಕಳ ತಾಲೂಕಿನ ಸಣ್ಣಬಾವಿ ಸಾತುಮನೆ ನಿವಾಸಿ ದೀಪಕ ನಾಗಪ್ಪ ನಾಯ್ಕ್ (23) ಹಾಗೂ ಕುಂದಾಪುರ ತಾಲೂಕಿನ ಹಡವು ನಿವಾಸಿ ಪೆಟ್ರಿಕ್ ವಾಜ್ (63) ಎಂದು ಗುರುತಿಸಲಾಗಿದೆ.


ಮಾಹಿತಿಯ ಪ್ರಕಾರ, ದೀಪಕ್ ಅವರು ಬೈಂದೂರು ಕಡೆಯಿಂದ ಕುಂದಾಪುರದ ಕಡೆಗೆ ರಾಷ್ಟ್ರೀಯ ಹೆದ್ದಾರಿ 66ರ ಪೂರ್ವ ಬದಿಯ ಏಕಮುಖ ರಸ್ತೆಯಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದರು. ಇದೇ ವೇಳೆ ತ್ರಾಸಿಯಿಂದ ಮರವಂತೆ ಕಡೆಗೆ ಅದೇ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸ್ಕೂಟರ್ ಚಲಾಯಿಸಿಕೊಂಡು ಬಂದ ಪೆಟ್ರಿಕ್ ವಾಜ್ ಅವರು ಬೈಕ್ಗೆ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ ಎನ್ನಲಾಗಿದೆ.


ಡಿಕ್ಕಿಯ ರಭಸಕ್ಕೆ ಇಬ್ಬರೂ ವಾಹನ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡ ದೀಪಕ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಸ್ಕೂಟರ್ ಸವಾರ ಪೆಟ್ರಿಕ್ ವಾಜ್ ಹಾಗೂ ಹಿಂಬದಿ ಸವಾರ ಪ್ಲೇನ್ಸೀಟಾ ಗಾಯಗೊಂಡಿದ್ದು, ಪೆಟ್ರಿಕ್ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಹ ಮೃತಪಟ್ಟಿದ್ದಾರೆ. ಹಿಂಬದಿ ಸವಾರ ಚಿಕಿತ್ಸೆ ಪಡೆಯುತ್ತಿದ್ದಾರೆ.


ತ್ರಾಸಿ ಬೀಚ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗೃಹರಕ್ಷಕ ದಳದ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯದಲ್ಲಿ ಗಂಗೊಳ್ಳಿ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ನೆರವಾದರು.

Leave a Reply

Your email address will not be published. Required fields are marked *