ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಬಂಟ್ವಾಳ ತಾಲೂಕು ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಉಡುಪಿ ಪ್ರಾದೇಶಿಕ ವಿಭಾಗದ ಆಶ್ರಯದಲ್ಲಿ ವಾಮದಪದವು ಬಸ್ತಿ ಕೋಡಿಯಲ್ಲಿ ನಡೆದ 2076ನೇ ಮಧ್ಯವರ್ಜನ ಶಿಬಿರದಲ್ಲಿ ಪಾನಮುಕ್ತರಾದ ಸದಸ್ಯರಿಗಾಗಿ “ಧರ್ಮಜ್ಯೋತಿ” ನವಜೀವನ ಸಮಿತಿಯನ್ನು ರಚಿಸಿ ಉದ್ಘಾಟಿಸಲಾಯಿತು.

ಬಂಟ್ವಾಳ ಯೋಜನಾ ಕಚೇರಿಯ ಉನ್ನತಿ ಸೌಧದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷ ರೊನಾಲ್ಡ್ ಡಿಸೋಜ ಸಮಿತಿಯನ್ನು ಉದ್ಘಾಟಿಸಿ ಮಾತನಾಡಿದರು.

ಪಾನಮುಕ್ತರಾಗಿ ಹೊಸ ಜೀವನ ಆರಂಭಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉತ್ತಮ ಅವಕಾಶ ಕಲ್ಪಿಸಿದ್ದು, ಸದಸ್ಯರು ಮದ್ಯಪಾನ ತ್ಯಜಿಸಿ ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಗುರುತಿಸಿಕೊಳ್ಳುವಂತೆ ಶುಭ ಹಾರೈಸಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಅವರು ಸಮಿತಿಯ ಸದಸ್ಯರ ಜವಾಬ್ದಾರಿ, ಕರ್ತವ್ಯ, ಮುಂದಿನ ಕಾರ್ಯಕ್ರಮಗಳು ಹಾಗೂ ಯೋಜನೆಯಿಂದ ದೊರೆಯುವ ಸಹಕಾರಗಳ ಕುರಿತು ಮಾಹಿತಿ ನೀಡಿದರು.

ಸಭೆಯಲ್ಲಿ ನವಜೀವನ ಸಮಿತಿಯ ಸದಸ್ಯರು ತಮ್ಮ ಅನುಭವ ಹಾಗೂ ಅಭಿಪ್ರಾಯಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ತಾಲೂಕು ಜನಜಾಗೃತಿ ವೇದಿಕೆಯ ಸದಸ್ಯ ಶೇಖರ್ ಸಾಮಾನಿ, ಹಿಂದಿನ ನವಜೀವನ ಸಮಿತಿ ಸದಸ್ಯರಾದ ಶ್ರೀನಿವಾಸ ಪೂಜಾರಿ (ಅಮ್ಟಾಡಿ), ಕೃಷ್ಣಪ್ಪ ಪೂಜಾರಿ (ಕುರಿಯಾಳ), ಜಯರಾಜ್ ಗಾಂದೋಡಿ, ಸೇವಾಪ್ರತಿನಿಧಿಗಳಾದ ವನಿತಾ, ಪ್ರತಿಭಾ, ಕವಿತಾ ಹಾಗೂ 2076ನೇ ಮಧ್ಯವರ್ಜನ ಶಿಬಿರದ ಎಲ್ಲಾ ನವಜೀವನ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಬಿ. ಮೋಡ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಆಶಾಲತಾ ಸ್ವಾಗತಿಸಿದರು. ನರಿಕೊಂಬು ಎ ಒಕ್ಕೂಟದ ಸೇವಾಪ್ರತಿನಿಧಿ ಕುಸುಮ ವಂದಿಸಿದರು. ಬಿಸಿ ರೋಡು ವಲಯದ ಮೇಲ್ವಿಚಾರಕ ಗಿರೀಶ್ ಕಾರ್ಯಕ್ರಮ ನಿರೂಪಿಸಿದರು.


