Breaking
7 Jul 2026, Tue

ಆ್ಯಂಬುಲೆನ್ಸ್‌ ಗೆ ದಾರಿ ಬಿಡದೆ ವೀಲಿಂಗ್ ಪುಂಡಾಟ; ವೈರಲ್ ವಿಡಿಯೋ ಬಳಿಕ ಆರೋಪಿಗಳ ಬೆನ್ನತ್ತಿದ ಪೊಲೀಸರು

ಬೆಂಗಳೂರು: ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್‌ ಗೆ ದಾರಿ ಬಿಡದೆ, ನಾಲ್ಕೈದು ಮಂದಿ ಯುವಕರು ಬೈಕ್ ಗಳಲ್ಲಿ ವೀಲಿಂಗ್ ಮಾಡಿ ಪುಂಡಾಟ ಮೆರೆದ ಘಟನೆ ಯಶವಂತಪುರ ಸಂಚಾರ ಠಾಣೆ ವ್ಯಾಪ್ತಿಯ ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದ ಸಮೀಪ ನಡೆದಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.


ಶನಿವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಯಶವಂತಪುರ ಸಂಚಾರ ಠಾಣೆ ಪೊಲೀಸರು ವಿಡಿಯೋ ಚಿತ್ರೀಕರಿಸಿದ್ದ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬೈಕ್ ಚಲಾಯಿಸಿದ್ದ ಇಬ್ಬರು ಹಾಗೂ ಅವರೊಂದಿಗೆ ಇದ್ದ ನಾಲ್ವರು ಯುವಕರಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಮಾಹಿತಿಯಂತೆ, ಆ್ಯಂಬುಲೆನ್ಸ್ ಚಾಲಕ ಸೈರನ್ ಹಾಗೂ ಹಾರ್ನ್ ಮೊಳಗಿಸುತ್ತಾ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ, ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಯುವಕರು ಮುಂಭಾಗದ ಚಕ್ರಗಳನ್ನು ಮೇಲಕ್ಕೆ ಎತ್ತಿ ವೀಲಿಂಗ್ ಮಾಡುತ್ತಾ ಸಾಗಿದ್ದಾರೆ. ಆ್ಯಂಬುಲೆನ್ಸ್‌ ಗೆ ತುರ್ತು ದಾರಿ ನೀಡಬೇಕಾದ ಪರಿಸ್ಥಿತಿಯಲ್ಲೂ ಅವರು ದಾರಿ ಬಿಡದೆ ಅಪಾಯಕಾರಿ ರೀತಿಯಲ್ಲಿ ವಾಹನ ಚಲಾಯಿಸಿದ್ದಾರೆ.


ಈ ದೃಶ್ಯದಿಂದ ಬೇಸತ್ತ ಆ್ಯಂಬುಲೆನ್ಸ್‌ ನಲ್ಲಿದ್ದ ವ್ಯಕ್ತಿಯೊಬ್ಬರು ಘಟನೆಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆದ ಬಳಿಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.


ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಯಶವಂತಪುರ ಸಂಚಾರ ಪೊಲೀಸರು, ಘಟನೆ ನಡೆದ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ವಾಹನಗಳ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಿದ್ದಾರೆ. ಅದರ ಆಧಾರದ ಮೇಲೆ ವಿಡಿಯೋ ಚಿತ್ರೀಕರಿಸಿದ್ದ ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದು, ಉಳಿದ ಆರೋಪಿಗಳ ಗುರುತು ಪತ್ತೆಯಾಗಿದೆ. ಅವರು ಯಶವಂತಪುರ ನಿವಾಸಿಗಳಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *