ಬೆಂಗಳೂರು: ಕಳೆದ ತಿಂಗಳು ನಡೆದ 11 ತಿಂಗಳ ಹೆಣ್ಣು ಮಗುವಿನ ಸಾವಿನ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು, ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಮಗುವಿನ ತಂದೆಯನ್ನು ಆವಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಆರೋಪಿಯಾಗಿರುವ ಮಗುವಿನ ತಾಯಿ ತಲೆಮರೆಸಿಕೊಂಡಿದ್ದು, ತಾವು ನಿರಪರಾಧಿಗಳು ಹಾಗೂ ಪೊಲೀಸರು ಉದ್ದೇಶಪೂರ್ವಕವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ಅಜ್ಞಾತ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ್ದಾರೆ.

ಬಂಧಿತ ಆರೋಪಿಯನ್ನು ಯಾದಗಿರಿ ಮೂಲದ ಶೇಖರ್ (22) ಎಂದು ಗುರುತಿಸಲಾಗಿದ್ದು, ಪತ್ನಿ ವಿಜಯಲಕ್ಷ್ಮೀ ಪರಾರಿಯಾಗಿದ್ದಾಳೆ. ಜೂನ್ 9ರಂದು ಕಿತಗನೂರು ಗ್ರಾಮದಲ್ಲಿ ಈ ಘಟನೆ ನಡೆದಿತ್ತು.

ಪೊಲೀಸರ ಮಾಹಿತಿ ಪ್ರಕಾರ, ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಶೇಖರ್ ಮತ್ತು ವಿಜಯಲಕ್ಷ್ಮೀಗೆ ಇಬ್ಬರು ಮಕ್ಕಳಿದ್ದು, ಎರಡನೇ ಮಗಳಾದ 11 ತಿಂಗಳ ರೇಣುಕಾಳನ್ನು ದಂಪತಿ ನಡುವಿನ ಜಗಳದ ವೇಳೆ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ. ಘಟನೆಯ ಬಳಿಕ ದಂಪತಿಯೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದರೂ, ಪರೀಕ್ಷಿಸಿದ ವೈದ್ಯರು ಮಗು ಮಾರ್ಗಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿಸಿದ್ದರು.

ಆರಂಭದಲ್ಲಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಮಗುವಿಗೆ ಹಾಲುಣಿಸುತ್ತಿದ್ದ ವೇಳೆ ತಾಯಿ ನಿದ್ರೆಗೆ ಜಾರಿದ್ದು, ಮಗು ಮಂಚದಿಂದ ಬಿದ್ದು ಮೃತಪಟ್ಟಿದೆ ಎಂದು ತಂದೆ ನೀಡಿದ್ದ ಹೇಳಿಕೆಯನ್ನು ದಾಖಲಿಸಿದ್ದರು. ಆದರೆ ಜೂನ್ 22ರಂದು ಬಂದ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಗುವಿನ ದೇಹದಲ್ಲಿ ತೀವ್ರ ರಕ್ತಸ್ರಾವ, ಉಸಿರಾಟದ ತೊಂದರೆ, ಖಾಸಗಿ ಭಾಗ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಾಯಗಳು ಹಾಗೂ ಒಳಾಂಗಗಳಿಗೆ ಹಾನಿಯಾಗಿರುವುದು ಬಹಿರಂಗಗೊಂಡಿತ್ತು.

ಇದಾದ ಬಳಿಕ ತನಿಖೆ ತೀವ್ರಗೊಳಿಸಿದ ಪೊಲೀಸರು, ಘಟನಾ ಸ್ಥಳದ ಪರಿಶೀಲನೆ ನಡೆಸಿ, ಎರಡು ಅಡಿ ಎತ್ತರದ ಮಂಚದಿಂದ ಬಿದ್ದರೆ ಇಂತಹ ಗಾಯಗಳಾಗಲು ಸಾಧ್ಯವಿಲ್ಲ ಎಂಬುದನ್ನು ದೃಢಪಡಿಸಿಕೊಂಡರು. ಸಾಕ್ಷಿದಾರರ ಹೇಳಿಕೆಗಳ ಪ್ರಕಾರ, ದಂಪತಿ ನಡುವೆ ವೈಯಕ್ತಿಕ ಕಾರಣಗಳಿಂದ ಆಗಾಗ ಜಗಳ ನಡೆಯುತ್ತಿದ್ದು, ಮಗುವಿನ ಮೇಲೂ ನಿರ್ಲಕ್ಷ್ಯವಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಜೂನ್ 9ರಂದು ಮಧ್ಯಾಹ್ನ ಊಟದ ವೇಳೆ ದಂಪತಿ ನಡುವೆ ವಾಗ್ವಾದ ನಡೆದಿದ್ದು, ಅಳುತ್ತಿದ್ದ ಮಗುವಿನ ಮೇಲೆ ಮೊದಲು ತಾಯಿ ಕಾಲಿನಿಂದ ಒದ್ದಿದ್ದಾಳೆ ಎನ್ನಲಾಗಿದೆ. ಬಳಿಕ ಜಗಳ ತೀವ್ರಗೊಂಡಾಗ ಅಡ್ಡ ಬಂದ ಮಗುವನ್ನು ತಂದೆ ಶೆಡ್ನಿಂದ ಹೊರಗೆ ಎಸೆದಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ. ನಂತರ ಮಗುವನ್ನು ಆಸ್ಪತ್ರೆಗೆ ದಾಖಲಿಸಿ, ಮಂಚದಿಂದ ಬಿದ್ದು ಮೃತಪಟ್ಟಿದೆ ಎಂದು ಸುಳ್ಳು ಮಾಹಿತಿ ನೀಡಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.


