ಬೆಂಗಳೂರು: ತನ್ನೊಂದಿಗೆ ಸಹಜೀವನ ನಡೆಸುತ್ತಿದ್ದ ಮಹಿಳೆಯನ್ನು ಕೊಲೆ ಮಾಡಿ ಬಿಹಾರಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಬಿಹಾರ ಮೂಲದ ಸಂಜೀವ್ ಪಾಸ್ವಾನ್ (40) ಎಂದು ಗುರುತಿಸಲಾಗಿದೆ. ಜೂನ್ 28ರಂದು ಪಶ್ಚಿಮ ಬಂಗಾಳ ಮೂಲದ ಕೃಷ್ಣ ಬರ್ಮನ್ ಅವರನ್ನು ಉಸಿರುಗಟ್ಟಿಸಿ, ಬಳಿಕ ಸಣ್ಣ ಗ್ಯಾಸ್ ಸಿಲಿಂಡರ್ನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಆರೋಪ ಈತನ ಮೇಲಿದೆ.

ಪೊಲೀಸರ ಮಾಹಿತಿ ಪ್ರಕಾರ, ಕೌಟುಂಬಿಕ ಕಾರಣಗಳಿಂದ ಪತಿಯಿಂದ ದೂರವಾಗಿದ್ದ ಕೃಷ್ಣ ಬರ್ಮನ್ ಅವರು ಮುನಿಯಪ್ಪ ಲೇಔಟ್ನ ಬಾಡಿಗೆ ಮನೆಯಲ್ಲಿ ವಾಸವಿದ್ದು, ಅಪಾರ್ಟ್ಮೆಂಟ್ವೊಂದರಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಈ ವೇಳೆ ಸಮೀಪದಲ್ಲೇ ವಾಸವಾಗಿದ್ದ ಸಂಜೀವ್ ಪಾಸ್ವಾನ್ ಅವರ ಪರಿಚಯವಾಗಿ, ಇಬ್ಬರೂ ಸಹಜೀವನ ನಡೆಸುತ್ತಿದ್ದರು. ಆರೋಪಿಯ ಪತ್ನಿ ಹಾಗೂ ಮಕ್ಕಳು ಬಿಹಾರದಲ್ಲೇ ವಾಸವಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಬ್ಬರ ನಡುವೆ ವೈಯಕ್ತಿಕ ವಿಚಾರಗಳಿಗೆ ಸಂಬಂಧಿಸಿದಂತೆ ಪದೇಪದೇ ಜಗಳ ನಡೆಯುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 28ರಂದು ಸಂಜೆ ಆರೋಪಿ ಮಹಿಳೆಯ ಮನೆಗೆ ಬಂದಿದ್ದು, ನಂತರ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದ ತಾರಕಕ್ಕೇರಿದಾಗ ಆರೋಪಿ ಮಹಿಳೆಯ ಬಾಯಿಗೆ ಬಟ್ಟೆ ತುರುಕಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದು, ಬಳಿಕ ಸಣ್ಣ ಗ್ಯಾಸ್ ಸಿಲಿಂಡರ್ನಿಂದ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಕೃತ್ಯ ಎಸಗಿದ ಬಳಿಕ ಆರೋಪಿ ಬಿಹಾರಕ್ಕೆ ಪರಾರಿಯಾಗಿದ್ದ.

ತನಿಖೆ ನಡೆಸಿದ ಬೊಮ್ಮನಹಳ್ಳಿ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ವೇಳೆ ವೈಯಕ್ತಿಕ ಅನುಮಾನ ಮತ್ತು ಸಂಬಂಧದ ವಿಚಾರವಾಗಿ ಉಂಟಾದ ಕಲಹವೇ ಕೃತ್ಯಕ್ಕೆ ಕಾರಣ ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಈ ಸಂಬಂಧ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.


