ಕೇರಳ: ಎರಡು ವರ್ಷಗಳ ಹಿಂದೆ ವಯನಾಡಿನ ಚೂರಲ್ಮಲದಲ್ಲಿ ಸಂಭವಿಸಿದ್ದ ಭೀಕರ ಭೂಕುಸಿತದ ನೋವು ಇನ್ನೂ ಮಾಸುವ ಮುನ್ನವೇ, ಜಿಲ್ಲೆಯ ಮೆಪ್ಪಾಡಿಯಲ್ಲಿ ಮತ್ತೊಂದು ಭೂಕುಸಿತ ದುರಂತ ಸಂಭವಿಸಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ಸುರಂಗ ನಿರ್ಮಾಣ ಪ್ರದೇಶದ ಮೀನಾಕ್ಷಿ ಸೇತುವೆ ಸಮೀಪ ಮಣ್ಣು ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದು, ಸುಮಾರು 20 ಮಂದಿ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ. ಅಲ್ಲದೆ 30 ಮಂದಿ ನಾಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದೆ.

ಘಟನೆಯಲ್ಲಿ ಗಾಯಗೊಂಡಿದ್ದ ಆರು ಮಂದಿಯನ್ನು ಸ್ಥಳೀಯರು ರಕ್ಷಿಸಿ ಮೆಪ್ಪಾಡಿಯ ಡಾ. ಮೂಪೆನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳನ್ನು ಹೀರಾ ಸುರೇಶ್, ದಿಲೀಪ್, ಸೂರಜ್, ಸಂಜಯ್ ಥಾಪುರ್, ರಜನೀಶ್ ಹಾಗೂ ತನ್ಮಯ್ ಘೋಷ್ ಎಂದು ಗುರುತಿಸಲಾಗಿದ್ದು, ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ.

ದುರಂತದ ಬಳಿಕ ಪೊಲೀಸರು, ಅಗ್ನಿಶಾಮಕ ದಳ ಹಾಗೂ ರಕ್ಷಣಾ ಸಿಬ್ಬಂದಿ ಶೋಧ ಮತ್ತು ರಕ್ಷಣಾ ಕಾರ್ಯವನ್ನು ತೀವ್ರಗೊಳಿಸಿದ್ದಾರೆ. ಅವಶೇಷಗಳಡಿ ಇನ್ನೂ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಕಳೆದ 24 ಗಂಟೆಗಳಲ್ಲಿ ವಯನಾಡು ಜಿಲ್ಲೆಯಲ್ಲಿ ಸುಮಾರು 26 ಸೆಂ.ಮೀ. ಮಳೆಯಾಗಿದ್ದು, ನಿರಂತರ ಮಳೆಯಿಂದಾಗಿ ಸುರಂಗ ಕಾಮಗಾರಿಯನ್ನು ನಿನ್ನೆಯಿಂದಲೇ ಸ್ಥಗಿತಗೊಳಿಸಲಾಗಿತ್ತು. ಮಣ್ಣು ಕುಸಿದ ಪ್ರದೇಶದಲ್ಲಿ ಹಲವು ವಾಹನಗಳೂ ಹೂತುಹೋಗಿವೆ. ಸುರಕ್ಷತಾ ದೃಷ್ಟಿಯಿಂದ ಚೂರಲ್ಮಲ ಭಾಗಕ್ಕೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಮುಖ್ಯಮಂತ್ರಿ ಇಬ್ಬರು ಸಚಿವರನ್ನು ತಕ್ಷಣವೇ ಸ್ಥಳಕ್ಕೆ ತೆರಳಿ ಪರಿಸ್ಥಿತಿಯ ಮೇಲ್ವಿಚಾರಣೆ ನಡೆಸುವಂತೆ ಸೂಚಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಭರದಿಂದ ಸಾಗುತ್ತಿದೆ.


