ಪುತ್ತೂರು: ಕಾಂಗ್ರೆಸ್ ಮುಖಂಡ ಹಾಗೂ ಕಂಬಳ ಕ್ಷೇತ್ರದ ಸಕ್ರಿಯ ಸಂಘಟಕರಾಗಿದ್ದ ನಿರಂಜನ ರೈ (60) ಮಠಂತಬೆಟ್ಟು ಅವರು ಬುಧವಾರ ಪುತ್ತೂರು ತಾಲೂಕು ಕಚೇರಿಯಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆಯುತ್ತಿದ್ದ ಭೂನ್ಯಾಯ ಮಂಡಳಿ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸಿದ್ದ ವೇಳೆ ಅವರು ಏಕಾಏಕಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಪ್ಪಿನಂಗಡಿ ಸಮೀಪದ ಮಠಂತಬೆಟ್ಟು ನಿವಾಸಿಯಾಗಿದ್ದ ನಿರಂಜನ ರೈ ಅವರು ಕೋಡಿಂಬಾಡಿ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಜೊತೆಗೆ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಸಕ್ರಿಯ ಸಂಘಟಕರಾಗಿದ್ದರು.

ಭೂನ್ಯಾಯ ಮಂಡಳಿ ಸದಸ್ಯರಾಗಿದ್ದ ಅವರು ಬನ್ನೂರು ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿಯೂ ಹಾಗೂ ಬಂಟರ ಸಂಘದ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಕಂಬಳ ಸ್ಪರ್ಧೆಗಳಲ್ಲಿ ವೀಕ್ಷಕ ವಿವರಣೆಗಾರರಾಗಿ ಪ್ರಸಿದ್ಧರಾಗಿದ್ದ ನಿರಂಜನ ರೈ ಅವರು ಕಂಬಳದ ಕುರಿತು ಹೊಂದಿದ್ದ ಅಪಾರ ಜ್ಞಾನ, ಸ್ಪಷ್ಟ ನಿರೂಪಣೆ ಹಾಗೂ ವಿಶಿಷ್ಟ ಶೈಲಿಯಿಂದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದು, ಅವರ ನಿಧನಕ್ಕೆ ರಾಜಕೀಯ, ಧಾರ್ಮಿಕ ಹಾಗೂ ಕಂಬಳ ವಲಯದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.


