Breaking
9 Jul 2026, Thu

ಟೋಲ್ ಶುಲ್ಕ ಪಾವತಿಸದೆ ಸೆನ್ಸಾರ್ ಬ್ಯಾರಿಯರ್ ಮುರಿದ ಕಾರು ಚಾಲಕ; ಬಂಟ್ವಾಳದಲ್ಲಿ ಪ್ರಕರಣ ದಾಖಲು

ಬಂಟ್ವಾಳ: ಟೋಲ್ ಶುಲ್ಕ ಪಾವತಿಸದೆ ಟೋಲ್ ಗೇಟ್ ನ ಸೆನ್ಸಾರ್ ಬ್ಯಾರಿಯರ್ ಅನ್ನು ಮುರಿದು ಕಾರು ಚಲಾಯಿಸಿಕೊಂಡು ಹೋದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲು ಟೋಲ್ ಗೇಟ್ ನಲ್ಲಿ ನಡೆದಿದೆ.


ಈ ಸಂಬಂಧ ಟೋಲ್ ಗೇಟ್ ಸಹಾಯಕ ವ್ಯವಸ್ಥಾಪಕ ಯಶವಂತ ಕುಂದರ್ ನೀಡಿದ ದೂರಿನ ಮೇರೆಗೆ ಕಾರು ಚಾಲಕನ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮಾಹಿತಿಯ ಪ್ರಕಾರ, ಟೋಲ್ ಶುಲ್ಕ ಪಾವತಿಸದ ಕಾರಣ ಸೆನ್ಸಾರ್ ಬ್ಯಾರಿಯರ್ ತೆರೆಯದೆ ವಾಹನವನ್ನು ತಡೆದಿತ್ತು. ಈ ವೇಳೆ ಕಾರಿನಿಂದ ಇಳಿದು ಬಂದ ಚಾಲಕನಿಗೆ ಟೋಲ್ ಸಿಬ್ಬಂದಿ ಶುಲ್ಕ ಪಾವತಿಸಿ ಮುಂದುವರಿಯುವಂತೆ ಸೂಚಿಸಿದ್ದರು.


ಆದರೆ, ಇದರಿಂದ ಆಕ್ರೋಶಗೊಂಡ ಚಾಲಕ ಟೋಲ್ ಸಿಬ್ಬಂದಿಯನ್ನು ತಡೆದು ನಿಲ್ಲಿಸಿ, ಸೆನ್ಸಾರ್ ಗೇಟ್ ಬಳಿ ತೆರಳಿ ಅದನ್ನು ಕೈಯಿಂದಲೇ ಮುರಿದು ಹಾಕಿದ್ದಾನೆ ಎನ್ನಲಾಗಿದೆ. ಬಳಿಕ ಕಾರನ್ನು ಚಲಾಯಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ಘಟನೆ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *