Breaking
9 Jul 2026, Thu

ಯಲ್ಲಾಪುರದಲ್ಲಿ ಭೀಕರ ರಸ್ತೆ ಅಪಘಾತ: ಲಾರಿಗೆ ಕ್ರೂಸರ್ ಡಿಕ್ಕಿ, 6 ಮಂದಿ ದುರ್ಮರಣ

ಉತ್ತರ ಕನ್ನಡ: ಲಾರಿ ಕ್ರೂಸರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕ್ರೂಸರ್ ವಾಹನದಲ್ಲಿದ್ದ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಆರತಿಬೈಲ್ ಸಮೀಪ ಜುಲೈ 9ರ ಗುರುವಾರ ಮುಂಜಾನೆ ನಡೆದಿದೆ.

ಧಾರವಾಡ ಮೂಲದ ಒಂಬತ್ತು ಮಂದಿ ಕ್ರೂಸರ್ ವಾಹನದಲ್ಲಿ ಅಂಕೋಲದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿ ರಸ್ತೆ ಬದಿಯ ತೊಡಿಗೆ ಉರುಳಿಬಿದ್ದಿದೆ.

ಅಪಘಾತದಲ್ಲಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟರೆ, ಮೂವರು ಗಾಯಗೊಂಡಿದ್ದು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೃತರನ್ನು ಧಾರವಾಡದ ಕುರುಬಗಟ್ಟಿಯ ಸಂಜೀವ (33), ಅಕ್ಷಯ್ (26), ಅಭಿಷೇಕ್ ಈಶ್ವರ್ (28), ಅಭಿಷೇಕ್ (27) ಹಾಗೂ ಬಸಪ್ಪ ದೇವಪ್ಪ ಕನಕನವರ (38) ಎಂದು ಗುರುತಿಸಲಾಗಿದೆ. ಮತ್ತೊಬ್ಬ ಮೃತರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕ್ರೂಸರ್ ಚಾಲಕನ ಅತಿವೇಗವೇ ಅಪಘಾತಕ್ಕೆ ಪ್ರಾಥಮಿಕ ಕಾರಣ ಎನ್ನಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಕ್ಷಣಾ ಕಾರ್ಯಾಚರಣೆಯಲ್ಲಿ ಸಾಮಾಜಿಕ ಕಾರ್ಯಕರ್ತರಾದ ಸತೀಶ್ ನಾಯ್ಕ್, ಬಾಳು ನಾಯ್ಕ್ ಅರೆಬೈಲ್ ಹಾಗೂ ಸ್ಥಳೀಯರು ಪೊಲೀಸರಿಗೆ ಸಹಕಾರ ನೀಡಿದರು.

Leave a Reply

Your email address will not be published. Required fields are marked *