ಸುಳ್ಯ: ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಹೊಸ ಅಡಿಕೆಯ ಗರಿಷ್ಠ ಖರೀದಿ ದರದಲ್ಲಿ ಪ್ರತಿ ಕೆ.ಜಿ.ಗೆ ₹5 ಏರಿಕೆ ದಾಖಲಾಗಿದೆ. ಜುಲೈ 7ರಂದು ₹470 ಇದ್ದ ಹೊಸ ಅಡಿಕೆಯ ಗರಿಷ್ಠ ದರ ಜುಲೈ 8ರಂದು ₹475ಕ್ಕೆ ಏರಿಕೆಯಾಗಿದೆ. ಸಿಂಗಲ್ ಚೋಲ್ ಹಾಗೂ ಡಬಲ್ ಚೋಲ್ ಅಡಿಕೆಯ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.

ಪ್ರಸ್ತುತ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ ಹಾಗೂ ಡಬಲ್ ಚೋಲ್ ಅಡಿಕೆ ತಲಾ ₹550, ಹೊಸ ಹಾಗೂ ಹಳೆ ಫಟ್ಟೋರಾ ₹380, ಹೊಸ ಹಾಗೂ ಹಳೆ ಕೊಕ್ಕಾ ₹330 ಹಾಗೂ ಹೊಸ ಹಾಗೂ ಹಳೆ ಕರ್ಗೋಟ್ ₹265ಕ್ಕೆ ಸ್ಥಿರವಾಗಿದೆ.

ಇದೇ ವೇಳೆ, ಮಹಾರಾಷ್ಟ್ರದಲ್ಲಿ ಅಡಿಕೆ ಸಾಗಾಟಕ್ಕೆ ಉಂಟಾಗಿದ್ದ ಅಡಚಣೆಗಳು ಬಹುತೇಕ ನಿವಾರಣೆಯಾಗಿದ್ದು, ಗುಜರಾತ್ ಸೇರಿದಂತೆ ಹೊರರಾಜ್ಯಗಳಿಗೆ ಅಡಿಕೆ ಸಾಗಾಟ ಮತ್ತೆ ಸುಗಮವಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ವಿಶ್ವಾಸದ ವಾತಾವರಣ ನಿರ್ಮಾಣವಾಗಿದ್ದು, ಅದರ ಪರಿಣಾಮವಾಗಿಯೇ ಹೊಸ ಅಡಿಕೆಯ ಗರಿಷ್ಠ ಖರೀದಿ ದರದಲ್ಲಿ ₹5 ಏರಿಕೆಯಾಗಿದೆ ಎಂದು ಅಡಿಕೆ ವಲಯದವರು ಅಭಿಪ್ರಾಯಪಟ್ಟಿದ್ದಾರೆ.

ಸಾಗಾಟ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದರೆ ಮುಂದಿನ ದಿನಗಳಲ್ಲಿ ಅಡಿಕೆ ಧಾರಣೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂಬ ನಿರೀಕ್ಷೆಯೂ ವ್ಯಕ್ತವಾಗಿದೆ.



