ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಕೆಪಿಟಿ ಸಮೀಪ ಬುಧವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸಿಐಎಸ್ಎಫ್ನ ಹೆಡ್ ಕಾನ್ಸ್ಟೆಬಲ್ ಒಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.

ಮೃತರನ್ನು ಉಪ್ಪಿನಂಗಡಿ ನಿವಾಸಿ ಹಾಗೂ ಜಮ್ಮುವಿನ ಸಿಐಎಸ್ಎಫ್ ಸೆಂಟ್ರಲ್ ಜೈಲಿನಲ್ಲಿ ಹೆಡ್ ಕಾನ್ಸ್ಟೆಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೀತಾರಾಮ ಗೌಡ (47) ಎಂದು ಗುರುತಿಸಲಾಗಿದೆ.

ಸೀತಾರಾಮ ಗೌಡ ಅವರು ಸ್ಕೂಟರ್ನಲ್ಲಿ ಕೆಪಿಟಿ ಕಡೆಯಿಂದ ಕೊಟ್ಟಾರಚೌಕಿ ಕಡೆಗೆ ತೆರಳುತ್ತಿದ್ದ ವೇಳೆ, ಸ್ಕೂಟರ್ ಮೊದಲು ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು, ಬಳಿಕ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಅಪಘಾತದ ತೀವ್ರತೆಗೆ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಅಪಘಾತಕ್ಕೆ ಬೇರೆ ವಾಹನದ ಡಿಕ್ಕಿ ಕಾರಣವೇ, ಅಥವಾ ಸ್ಕೂಟರ್ನ ನಿಯಂತ್ರಣ ತಪ್ಪಿದ್ದರಿಂದ ಘಟನೆ ಸಂಭವಿಸಿತೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡಿಕ್ಕಿಯ ಬಳಿಕ ಸ್ಕೂಟರ್ ಸುಮಾರು 20 ಮೀಟರ್ಗಳಷ್ಟು ದೂರ ರಸ್ತೆ ವಿಭಾಜಕವನ್ನು ಸವರಿಕೊಂಡು ಹೋಗಿ, ನಂತರ ವಿದ್ಯುತ್ ಕಂಬಕ್ಕೆ ಅಪ್ಪಳಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಕದ್ರಿ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ನಿಖರ ಕಾರಣ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.



