ಮಂಗಳೂರು: ಮಂಗಳೂರಿನ ದಕ್ಷಿಣ ಪೊಲೀಸ್ ಠಾಣೆ (ಪಾಂಡೇಶ್ವರ ಪೊಲೀಸ್ ಠಾಣೆ) ವ್ಯಾಪ್ತಿಯಲ್ಲಿ 2014ರಲ್ಲಿ ದಾಖಲಾಗಿದ್ದ ಡಕಾಯಿತಿ ಪ್ರಕರಣದ ಆರೋಪಿ ಶಕೀಲ್ (33) ಎಂಬಾತನನ್ನು ಪೊಲೀಸರು 12 ವರ್ಷಗಳ ಬಳಿಕ ಬಂಧಿಸಿದ್ದಾರೆ.

ಮಂಗಳೂರು ಜಪ್ಪು ನಿವಾಸಿಯಾಗಿರುವ ಶಕೀಲ್ ಪ್ರಕರಣ ದಾಖಲಾದ ಬಳಿಕ ಬಂಧನಕ್ಕೆ ಸಿಗದೆ ತಲೆಮರೆಸಿಕೊಂಡಿದ್ದ. ಇದರಿಂದ ಆತನ ವಿರುದ್ಧ ತಲೆಮರೆಸಿಕೊಂಡಿರುವ ಆರೋಪಿಯಾಗಿ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ದೀರ್ಘಕಾಲ ಬಂಧನಕ್ಕೆ ಸಿಗದ ಹಿನ್ನೆಲೆಯಲ್ಲಿ ನ್ಯಾಯಾಲಯವು ಪ್ರಕರಣವನ್ನು ಎಲ್.ಪಿ.ಸಿ. (Long Pending Case) ಆಗಿ ಪರಿವರ್ತಿಸಿತ್ತು.

ಇದೀಗ ಆರೋಪಿಯ ಇರುವಿಕೆ ಕುರಿತು ದೊರೆತ ಖಚಿತ ಮಾಹಿತಿಯ ಆಧಾರದ ಮೇಲೆ ಪಾಂಡೇಶ್ವರ ಪೊಲೀಸರು ಕಾರ್ಯಾಚರಣೆ ನಡೆಸಿ, ಮಂಗಳೂರಿನ ನಂದಿಗುಡ್ಡ ಸರ್ಕಲ್ ಬಳಿ ಶಕೀಲ್ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಮುಂದುವರಿದಿದ್ದು, ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.




