Breaking
9 Jul 2026, Thu

ಕಲಬುರಗಿಯಲ್ಲಿ ಮಧ್ಯರಾತ್ರಿ ಭೂಮಿ ಕಂಪನ; ಭಯದಿಂದ ಮನೆಗಳಿಂದ ಹೊರಗೆ ಓಡಿದ ಜನ

ಕಲಬುರಗಿ: ನಗರ ಸೇರಿದಂತೆ ಸುತ್ತಮುತ್ತಲಿನ ಕೆಲವು ಪ್ರದೇಶಗಳಲ್ಲಿ ಗುರುವಾರ ನಸುಕಿನ ವೇಳೆ ಭೂಮಿ ಕೆಲ ಸೆಕೆಂಡುಗಳ ಕಾಲ ಕಂಪಿಸಿದ ಅನುಭವವಾಗಿದ್ದು, ಜನರು ಭಯಭೀತರಾಗಿ ಮನೆಗಳಿಂದ ಹೊರಗೆ ಓಡಿ ಬಂದ ಘಟನೆ ನಡೆದಿದೆ.


ನಸುಕಿನ ಸುಮಾರು 1.30ರಿಂದ 1.41ರ ನಡುವೆ 4ರಿಂದ 5 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಕಂಪನದ ವೇಳೆ ಹಲವು ಮನೆಗಳ ಬಾಗಿಲು, ಕಿಟಕಿಗಳು ಗಡಗಡನೆ ನಡುಗಿದ್ದು, ಮೇಲ್ಭಾಗದಲ್ಲಿ ಇಟ್ಟಿದ್ದ ಕೆಲವು ವಸ್ತುಗಳು ಕೆಳಗೆ ಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.


ಹರಿಕೃಷ್ಣ ನಗರ, ಮಹಾವೀರ ನಗರ ಸೇರಿದಂತೆ ನಗರದ ವಿವಿಧ ಭಾಗಗಳಿಂದ ಭೂಕಂಪದ ಅನುಭವವಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಘಟನೆಯಿಂದ ಆತಂಕಗೊಂಡ ನಿವಾಸಿಗಳು ಸುರಕ್ಷತೆಗಾಗಿ ಮನೆಗಳಿಂದ ಹೊರಬಂದು ಕೆಲಕಾಲ ಹೊರಗೇ ಕಾಲ ಕಳೆದರು.


ಇದೇ ವೇಳೆ ಮಹಾರಾಷ್ಟ್ರದ ಹಿಂಗೋಲಿ ಪ್ರದೇಶದಲ್ಲೂ ಭೂಕಂಪ ಸಂಭವಿಸಿರುವುದಾಗಿ ವರದಿಯಾಗಿದೆ. ಸುಮಾರು 10 ಕಿಲೋಮೀಟರ್ ಆಳದಲ್ಲಿ 3.6 ತೀವ್ರತೆಯ ಭೂಕಂಪ ದಾಖಲಾಗಿದ್ದು, ರಾತ್ರಿ ವೇಳೆ ಮೂರು ಬಾರಿ ಕಂಪನಗಳು ಸಂಭವಿಸಿದ್ದಾಗಿ ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.


ಸದ್ಯ ಕಲಬುರಗಿ ಭಾಗದಲ್ಲಿ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಸಂಬಂಧಿತ ಇಲಾಖೆಗಳು ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಜನರು ವದಂತಿಗಳಿಗೆ ಕಿವಿಗೊಡದೆ ಅಧಿಕೃತ ಮಾಹಿತಿಯನ್ನು ಮಾತ್ರ ನಂಬುವಂತೆ ಸೂಚಿಸಲಾಗಿದೆ.

Leave a Reply

Your email address will not be published. Required fields are marked *