ಕಲ್ಲಡ್ಕ: “ಪ್ರಕೃತಿಯ ನಾಶ ಜಗತ್ತು ಸರ್ವನಾಶ” ಎಂಬುದು ಬ್ರಹ್ಮಶ್ರೀ ನಾರಾಯಣ ಗುರುಗಳ ಪರಿಸರ ಸಂರಕ್ಷಣೆಯ ಸಂದೇಶದ ಸಾರವಾಗಿದ್ದು, ಪ್ರಕೃತಿಯನ್ನು ನಾಶ ಮಾಡಿದರೆ ಅದರ ದುಷ್ಪರಿಣಾಮ ಇಡೀ ಮಾನವಕುಲ ಹಾಗೂ ಜೀವಜಗತ್ತಿನ ಮೇಲೆ ಬೀಳುತ್ತದೆ ಎಂದು ಯುವವಾಹಿನಿ (ರಿ.) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಹೇಳಿದರು.

ಜುಲೈ 9ರಂದು ವೀರಕಂಭ ಗ್ರಾಮದ ಗೋಳಿಮಾರು ಜನಾರ್ಧನ ಪೂಜಾರಿಯವರ ನೂತನ ಗೃಹ “ಬ್ರಹ್ಮಶ್ರೀ” ನಿವಾಸದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಆಯೋಜಿಸಲಾದ ಗುರುತತ್ವವಾಹಿನಿ 70ನೇ ಮಾಲಿಕೆ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದ ಅವರು, ಪ್ರಕೃತಿಯನ್ನು ಪೂಜ್ಯಭಾವದಿಂದ ಕಾಪಾಡಿ, ಉಳಿಸಿ, ಬೆಳೆಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಕರೆ ನೀಡಿದರು.

ದೇವರನ್ನು ಹೇಗೆ ನಿತ್ಯ ಭಕ್ತಿಯಿಂದ ಆರಾಧಿಸುತ್ತೇವೆಯೋ, ಅದೇ ರೀತಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಪ್ರತಿದಿನ ಸ್ಮರಿಸಬೇಕು. ಗುರುಗಳು ಸಮಾಜದಲ್ಲಿ ತಂದ ಸಾಮಾಜಿಕ ಕ್ರಾಂತಿಯಿಂದಲೇ ಇಂದು ಸಮಾಜ ತಲೆ ಎತ್ತಿ ಬದುಕುವಂತಾಗಿದೆ. ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಪರಿಸರ ಸಂರಕ್ಷಣೆಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಲ್ಲವ ಸಂಘ ವೀರಕಂಭ ಗ್ರಾಮ ಬಿಲ್ಲವ ಸಮಿತಿಯ ನಿಕಟ ಪೂರ್ವ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು, ಶೇಖರ್ ನರಿಕೊಂಬು, ಕಾರ್ಯಕ್ರಮಕ್ಕೆ ಅವಕಾಶ ಕಲ್ಪಿಸಿದ ಜನಾರ್ಧನ ಪೂಜಾರಿ ಹಾಗೂ ಕುಟುಂಬದ ಸದಸ್ಯರು, ಯುವವಾಹಿನಿ (ರಿ.) ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷ ನಿಕೇಶ್ ಕೋಟ್ಯಾನ್, ದ್ವಿತೀಯ ಉಪಾಧ್ಯಕ್ಷ ಹರೀಶ್ ಅಜೆಕಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಇದೇ ವೇಳೆ ನಿರ್ದೇಶಕರಾದ ಚಿನ್ನಾ ಕಲ್ಲಡ್ಕ, ಶೈಲೇಶ್ ಕುಚಿಗುಡ್ಡೆ, ನವೀನ್ ಪೂಜಾರಿ ಕಾರಾಜೆ, ಸಂಘಟನಾ ಕಾರ್ಯದರ್ಶಿ ಸುನಿತಾ ನಿತಿನ್ ಮಾರ್ನಬೈಲ್, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕರ್ಕೇರಾ, ಅರುಣ್ ಮಹಾಕಾಳಿಬೆಟ್ಟು, ನಾಗೇಶ್ ಪೊನ್ನೋಡಿ ಹಾಗೂ ಸದಸ್ಯರು, ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಪ್ರಜಿತ್ ಅಮೀನ್ ಏರಮಲೆ ಕಾರ್ಯಕ್ರಮವನ್ನು ಸ್ವಾಗತಿಸಿ, ನಾರಾಯಣ ಗುರುತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು.


