Breaking
13 Jul 2026, Mon

‘ಅಪಾರ್ಟ್ಮೆಂಟ್’ ಕನ್ನಡ ಕಿರುಚಿತ್ರ ಚಿತ್ರೀಕರಣ ಪೂರ್ಣ; ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿ ಸಿನಿಮಾ

ಮೈಸೂರು: ರಂಗ ಚಂದ್ರಮ ಪ್ರತಿಷ್ಠಾನದ ನಿರ್ಮಾಣದ ‘ಅಪಾರ್ಟ್ಮೆಂಟ್’ ಕನ್ನಡ ಕಿರುಚಿತ್ರದ ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಪ್ರಸ್ತುತ ಡಬ್ಬಿಂಗ್, ಸಂಕಲನ ಹಾಗೂ ಸಂಗೀತ ಸಂಯೋಜನೆಯ ಕೆಲಸಗಳು ಭರದಿಂದ ಸಾಗುತ್ತಿವೆ.

ರೋಚಕ ಪತ್ತೆದಾರಿ ಕಥಾಹಂದರ ಹೊಂದಿರುವ ಈ ಕಿರುಚಿತ್ರವು ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ನಿರೂಪಣೆಯೊಂದಿಗೆ ಯುವ ಸಮೂಹದ ಬದುಕಿನ ಹಲವು ಆಯಾಮಗಳನ್ನು ತೆರೆದಿಡಲಿದೆ. ಪ್ರತಿಯೊಂದು ದೃಶ್ಯವೂ ನಿಗೂಢತೆಯಿಂದ ಕೂಡಿದ್ದು, ಕನ್ನಡ ಪ್ರೇಕ್ಷಕರ ಮನಗೆಲ್ಲುವ ವಿಶ್ವಾಸವನ್ನು ಚಿತ್ರತಂಡ ವ್ಯಕ್ತಪಡಿಸಿದೆ.

ಚಿತ್ರಕ್ಕೆ ಜಯಚಂದ್ರ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ಹ.ರಾ. ಭದ್ರೇಶ್ ಪ್ರಸಾಧನ, ಜಾಸ್ಟಿನ್ ಮಾರ್ಕ್ ಡಿಸೋಜ ಸಂಗೀತ, ಜತಿನ್ ಜಾರ್ಜ್ ಛಾಯಾಗ್ರಹಣ ಹಾಗೂ ಆಕಾಶ್ ಫ್ರಾನ್ಸಿಸ್ ಸಂಕಲನದ ಜೊತೆಗೆ ನಾಯಕನಟನಾಗಿಯೂ ಅಭಿನಯಿಸಿದ್ದಾರೆ.

ನಾಯಕಿಯಾಗಿ ಇಂಚರಾ ಶೆಟ್ಟಿ ನಟಿಸಿದ್ದು, ಧನ್ ಪಾಲ್, ರಾಧಾಕೃಷ್ಣ ಸೂರ್ಯವಂಶಿ, ಕೃಷ್ಣಮೂರ್ತಿ ಜಿ.ವಿ., ದೇವರಾಜಪ್ಪ ಎಂ.ಸಿ., ಪರಮೇಶ್ ಎಸ್., ಯೋಗೀಶ್ ಎಂ.ಕೆ., ಶ್ರೀಮತಿ ನವ್ಯ, ಕುಮಾರಿ ನಿಸರ್ಗ ಹಾಗೂ ಕಿರಣ್** ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷ ಇನ್ಸ್‌ಪೆಕ್ಟರ್ ಪಾತ್ರದಲ್ಲಿ ಮೈಸೂರಿನ ‘ರಕ್ತದಾನಿ ಮಂಜು’ ಅಭಿನಯಿಸಿರುವುದು ಚಿತ್ರದ ಮತ್ತೊಂದು ವಿಶೇಷವಾಗಿದೆ.

ರಂಗ ಚಂದ್ರಮ ಪ್ರತಿಷ್ಠಾನದ ಈ ಮಹತ್ವಾಕಾಂಕ್ಷಿ ಕಿರುಚಿತ್ರ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದು, ವಿಭಿನ್ನ ಕಥಾಹಂದರದ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆಯುವ ನಿರೀಕ್ಷೆ ಮೂಡಿಸಿದೆ.

Leave a Reply

Your email address will not be published. Required fields are marked *