ಮಂಗಳೂರು: ಕೊಂಕಣಿ 5ನೇ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರದಾನ ಮಾಡಲಾಗುವ ರಾಷ್ಟ್ರೀಯ ಚಾರೊಳಿ ಸನ್ಮಾನಕ್ಕೆ ಮಂಗಳೂರಿನ ಹಿರಿಯ ಕವಯತ್ರಿ ಅರುಂಧತಿ ವಿ. ರಾವ್ ಹಾಗೂ ಗೋವಾದ ಹಿರಿಯ ಕವಯತ್ರಿ ಆನ್ನಿ ದೆ ಕೊಲ್ವಾಲೆ ಆಯ್ಕೆಯಾಗಿದ್ದಾರೆ ಎಂದು ಸಮ್ಮೇಳನದ ಅಧ್ಯಕ್ಷ ರೇಮಂಡ್ ಡಿಕುನಾ ತಾಕೊಡೆ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 19ರಂದು ಮಂಗಳೂರಿನಲ್ಲಿ ನಡೆಯಲಿರುವ ಒಂದು ದಿನದ ಕೊಂಕಣಿ ಐದನೇ ಚಾರೊಳಿ ಸಾಹಿತ್ಯ ಸಮ್ಮೇಳನಕ್ಕೆ ದೆಹಲಿ, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕಾರವಾರ, ಕೇರಳ ಹಾಗೂ ದುಬೈ ಸೇರಿದಂತೆ ವಿವಿಧ ಭಾಗಗಳ ಕವಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಹಿಂದಿನ ದಿನವೇ ಹೆಚ್ಚಿನ ಸಂಖ್ಯೆಯಲ್ಲಿ ಕವಿಗಳು ಆಗಮಿಸುವ ಹಿನ್ನೆಲೆಯಲ್ಲಿ ಬೆಳಗ್ಗೆ 8 ಗಂಟೆಗೆ ಕವಿಗೋಷ್ಠಿಗೆ ಚಾಲನೆ ನೀಡಲಾಗುವುದು. ಖ್ಯಾತ ರಂಗಭೂಮಿ ತರಬೇತುದಾರ, ಕವಿ ಹಾಗೂ ಕೊಂಕಣಿ ಶಿಕ್ಷಕರಾದ ಗೌರೀಶ ವರ್ಣೇಕರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಬೆಳಗ್ಗೆ 10 ಗಂಟೆಗೆ ಜಿಲ್ಲಾ ಪ್ರಧಾನ ಸರ್ಕಾರಿ ಅಭಿಯೋಜಕ ಎಂ.ಪಿ. ನೊರೊನಾ ಸಮ್ಮೇಳನ ಉದ್ಘಾಟಿಸಲಿದ್ದು, ಉದ್ಯಮಿ ವಿನ್ಸೆಂಟ್ ಕುತಿನೊ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ ಕವಿಗೋಷ್ಠಿ ಮುಂದುವರಿಯಲಿದ್ದು, ಮಧ್ಯಾಹ್ನ ವಿದ್ಯಾರ್ಥಿಗಳು ಮತ್ತು ಕವಿಗಳೊಂದಿಗೆ ಸಾಹಿತ್ಯ ಹಾಗೂ ಕಾವ್ಯದ ಕುರಿತು ಮುಕ್ತ ಸಂವಾದ ನಡೆಯಲಿದೆ.

ಸಮಾರೋಪ ಸಮಾರಂಭದಲ್ಲಿ ಗೋವಾದ ಪ್ರಕಾಶಕಿ ಹಾಗೂ ಕೊಂಕಣಿ ಮಾತೃಭಾಷಾ ಶಿಕ್ಷಕಿ ಯೋಗಿತಾ ವರ್ಣೇಕರ್ ಸಮಾರೋಪ ಭಾಷಣ ಮಾಡಲಿದ್ದು, ಶ್ರೀನಿವಾಸ ನಾಯಕ್ ಇಂದಾಜೆ ಹಾಗೂ ಎಲಿಯಾಸ್ ಫೆರ್ನಾಂಡೀಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಮ್ಮೇಳನದ ಅಯೋಜನೆಯ ಗುರ್ಕಾರ್ ಗೌರೀಶ ವರ್ಣೇಕರ್ ಮಡ್ಗಾಂವ್ ಗೋವಾ ಮತ್ತು ಸಮಿತಿ ಸದಸ್ಯರು ಕೇರಳದ ವಿಜಯ್ ಪೈ, ಕರ್ನಾಟಕ ಕಾರವಾರದ ಸಂದೇಶ ಬಾಂದೇಕರ್, ಗೋವಾದ ಆನ್ನಿ ಫರ್ನಾಂಡೀಸ್ ತೀವಿಮ್ ಗೋವಾ, ಪಣಜಿ ಗೋವಾದ ಅನಗಾ ಕಾಮತ್, ದೆಹಲಿಯ ಗೋಪಾಲಕೃಷ್ಣ ಪ್ರಭು, ಕರ್ನಾಟಕ ಬೆಂಗಳೂರಿನ ಜಾನೆಟ್ ವಾಸ್ ಆಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಐದನೇ ರಾಷ್ಟ್ರೀಯ ಚಾರೊಳಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುವ ರೇಮಂಡ್ ಡಿಕುನಾ ತಾಕೊಡೆ, ಸಮ್ಮೇಳನದ ಅಯೋಜನಾ ಸಮಿತಿಯ ಕಾರ್ಯದರ್ಶಿ ರಿಯಾನ ಡಿಕುನಾ, ಮಾದ್ಯಮ ಸಲಹೆಗಾರ ಎಲಿಯಾಸ್ ಫೆರ್ನಾಂಡೀಸ್, ಕಾರ್ಯಕಾರಿ ಸದಸ್ಯ ಸ್ಟೇನಿ ತಾವ್ರೊ ಉಪಸ್ಥಿತರಿದ್ದರು.



