ಮಂಗಳೂರು: ಖ್ಯಾತ ರಂಗಕರ್ಮಿ, ಲೇಖಕ, ಸಾಹಿತ್ಯಗಾರ ಹಾಗೂ ಹಿರಿಯ ಪತ್ರಕರ್ತ ಪರಮಾನಂದ ವಿ. ಸಾಲ್ಯಾನ್ ಸಸಿಹಿತ್ಲು (65) ಅವರು ಸೋಮವಾರ(ಜು.13) ನಿಧನರಾಗಿದ್ದಾರೆ.

ಪರಮಾನಂದ ಸಾಲ್ಯಾನ್ ಅವರು ಕರಾವಳಿಯ ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದ ವ್ಯಕ್ತಿತ್ವವಾಗಿದ್ದರು.

ಸಸಿಹಿತ್ಲು ಶ್ರೀ ಸರಂತಾಯ ಗರೋಡಿ ಉಳ್ಳಾಯ ದೈವಸ್ಥಾನದ ಮಾಜಿ ಅಧ್ಯಕ್ಷರಾಗಿದ್ದ ಅವರು, ದೇವಾಲಯದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಜೊತೆಗೆ ಸಸಿಹಿತ್ಲು ಶ್ರೀ ಭಗವತಿ ದೇವಸ್ಥಾನದ ಆಡಳಿತ ಸಮಿತಿಯಲ್ಲಿಯೂ ಸಕ್ರಿಯರಾಗಿದ್ದರು.

ರಂಗಭೂಮಿಯ ಮೇಲೆ ಅಪಾರ ಆಸಕ್ತಿ ಹೊಂದಿದ್ದ ಅವರು ಹಲವು ನಾಟಕಗಳನ್ನು ನಿರ್ದೇಶಿಸಿದ್ದು, ರಂಗ ಸುದರ್ಶನ ಸಸಿಹಿತ್ಲು ನಾಟಕ ತಂಡದ ಸಂಸ್ಥಾಪಕ ಅಧ್ಯಕ್ಷರಾಗಿದ್ದರು.

ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ಅವರು ತಮ್ಮದೇ ಆದ ಗುರುತು ಮೂಡಿಸಿದ್ದರು. ಅಜೇಯ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದ ಅವರು, ಮುಂಗಾರು ಹಾಗೂ ಹೊಸ ದಿಗಂತ ಸೇರಿದಂತೆ ಹಲವು ಕನ್ನಡ ದಿನಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದರು. ಕರಾವಳಿ ಕರ್ನಾಟಕ ಹಾಗೂ ಮುಂಬೈನ ಅನೇಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಗಳೊಂದಿಗೆ ಅವರು ನಿಕಟ ಸಂಪರ್ಕ ಹೊಂದಿದ್ದರು.

ಅವರು ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಕುಟುಂಬದ ಮಾಹಿತಿ ಪ್ರಕಾರ, ಪರಮಾನಂದ ವಿ. ಸಾಲ್ಯಾನ್ ಅವರ ಪಾರ್ಥಿವ ಶರೀರವನ್ನು ಮಂಗಳವಾರ ಸಂಜೆ 4 ಗಂಟೆಗೆ ಸಸಿಹಿತ್ಲುವಿನ ಅವರ ನಿವಾಸದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇರಿಸಲಾಗುವುದು. ಬಳಿಕ ಅಂತ್ಯಕ್ರಿಯೆ ನೆರವೇರಲಿದೆ.


