ಕುಂಬ್ಡಾಜೆ: ಒಂದೇ ಕುಟುಂಬದ ಅವಿವಾಹಿತ ಸಹೋದರರಿಬ್ಬರು ಒಂದೇ ದಿನ ಮೂರೂವರೆ ಗಂಟೆಗಳ ಅಂತರದಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಕುಂಬ್ಡಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಬ್ರಂಗಳದಲ್ಲಿ ನಡೆದಿದೆ.

ಉಬ್ರಂಗಳದ ದಿ. ವೆಂಕಟ್ರಮಣ ಭಟ್ ಅವರ ಪುತ್ರರಾದ ರಾಮಕೃಷ್ಣ ಭಟ್ (67) ಹಾಗೂ ಅವರ ಸಹೋದರ ಕೇಶವ ಭಟ್ (61) ಮೃತಪಟ್ಟವರು.

ರವಿವಾರ ರಾತ್ರಿ ಸುಮಾರು 7 ಗಂಟೆಗೆ ರಾಮಕೃಷ್ಣ ಭಟ್ ಅವರು ಮನೆಯಲ್ಲಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮುನ್ನವೇ ಮೃತಪಟ್ಟಿದ್ದಾರೆ. ಇದಾದ ಸುಮಾರು ಮೂರೂವರೆ ಗಂಟೆಗಳ ಬಳಿಕ, ರಾತ್ರಿ 10.30ರ ವೇಳೆಗೆ ಸಹೋದರ ಕೇಶವ ಭಟ್ ಅವರೂ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಬದಿಯಡ್ಕ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಉಬ್ರಂಗಳದಲ್ಲಿರುವ ಅವರ ಮನೆಯ ಸಮೀಪ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಮೃತರಿಗೆ ಓರ್ವ ಸಹೋದರ ಹಾಗೂ ಸಹೋದರಿ ಇದ್ದು, ಒಬ್ಬರು ಸಹೋದರಿ ಈ ಹಿಂದೆಯೇ ನಿಧನ ಹೊಂದಿದ್ದರು.



