ಬೆಳ್ತಂಗಡಿ: ಪೌರ ಕಾರ್ಮಿಕರಿಗೆ ದೊರಕಬೇಕಾದ ಗೃಹಭಾಗ್ಯ, ನಿವೇಶನ ಸೇರಿದಂತೆ ಸಂವಿಧಾನಬದ್ಧ ಸವಲತ್ತುಗಳನ್ನು ನಿರಾಕರಿಸಿದರೆ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಎಚ್ಚರಿಕೆ ನೀಡಿದರು.

ಸೋಮವಾರ ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರು ಹಾಗೂ ಗ್ರಾಮ ಪಂಚಾಯತ್ ಸ್ವಚ್ಛತಾ ಕಾರ್ಮಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್ ಸುದೆಮುಗೇರು ಮಾತನಾಡಿ, ಪಟ್ಟಣ ಪಂಚಾಯತ್‌ನಲ್ಲಿ ಗೃಹಭಾಗ್ಯ ಯೋಜನೆಯನ್ನು ಜಾರಿಗೊಳಿಸುತ್ತಿಲ್ಲ ಎಂದು ದೂರಿದರು.

ಕಾರ್ಯದರ್ಶಿ ಚಂದ್ರಭೋವಿ ಮಾತನಾಡಿ, ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಸ್ವಂತ ಜಮೀನು ಇಲ್ಲ. ನಿವೇಶನಕ್ಕಾಗಿ ಕಳೆದ ಐದು ವರ್ಷಗಳಿಂದ ಮನವಿ ಮಾಡುತ್ತಿದ್ದರೂ ‘ಇಂದು-ನಾಳೆ’ ಎಂದು ಸತಾಯಿಸಲಾಗುತ್ತಿದೆ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿದ ಪಿ. ರಘು, ಗೃಹಭಾಗ್ಯ ಯೋಜನೆ ಜಾರಿ ಹಾಗೂ ನಿವೇಶನ ನೀಡುವಲ್ಲಿ ನಿರ್ಲಕ್ಷ್ಯ ತೋರಿದ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕೆ. ರಾಜೇಶ್ ಹಾಗೂ ಆಡಳಿತಾಧಿಕಾರಿ, ತಹಶೀಲ್ದಾರ್ ಎಸ್.ಎನ್. ನರಗುಂದ ಅವರನ್ನು ತರಾಟೆಗೆ ತೆಗೆದುಕೊಂಡರು. ಇಂತಹ ನಿರ್ಲಕ್ಷ್ಯವನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.

ಪೌರ ಕಾರ್ಮಿಕರಿಗೆ ತಿಂಗಳಿಗೆ ಕೇವಲ ಒಂದು ಸೋಪ್ ನೀಡುತ್ತಿರುವ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಇಂತಹ ಪ್ರಕರಣಗಳು ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇದೇ ವೇಳೆ, ಕಾನೂನುಬಾಹಿರವಾಗಿ ಪಟ್ಟಣ ಪಂಚಾಯತ್ ಸದಸ್ಯೆಯ ಪತಿಯನ್ನು ಸ್ಯಾನಿಟೈಸರ್ ಗುಮಾಸ್ತರಾಗಿ ನೇಮಕ ಮಾಡಿರುವ ಕುರಿತು ಮಾಹಿತಿ ಪಡೆದ ಅಧ್ಯಕ್ಷರು, ಅವರನ್ನು ತಕ್ಷಣ ಸೇವೆಯಿಂದ ಕೈಬಿಟ್ಟು ಅರ್ಹತೆಯ ಆಧಾರದಲ್ಲಿ ಪೌರ ಕಾರ್ಮಿಕರನ್ನು ನೇಮಕ ಮಾಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು.
ಪಟ್ಟಣ ಪಂಚಾಯತ್‌ನ ಸ್ವಚ್ಛತಾ ವಾಹನ, ಶೌಚಾಲಯ ಹಾಗೂ ಡ್ರೈನೇಜ್ ಸ್ವಚ್ಛತಾ ವಾಹನಗಳ ಚಾಲಕರು ಕೂಡ ತಮ್ಮ ಸಮಸ್ಯೆಗಳನ್ನು ಅಧ್ಯಕ್ಷರ ಗಮನಕ್ಕೆ ತಂದರು.

ಸ್ವಚ್ಛತಾ ಕಾರ್ಮಿಕರ ವೇತನದ ಬಗ್ಗೆಯೂ ಅಸಮಾಧಾನ:
ಗ್ರಾಮ ಪಂಚಾಯತ್‌ಗಳಲ್ಲಿ ದುಡಿಯುತ್ತಿರುವ ಸ್ವಚ್ಛತಾ ಕಾರ್ಮಿಕರಿಗೆ ತಿಂಗಳಿಗೆ ಕೇವಲ 12–13 ದಿನ ಕೆಲಸ ನೀಡಿ, ನಾಲ್ಕೈದು ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ. ಇಎಸ್‌ಐ, ಪಿಎಫ್ ಹಾಗೂ ಆರೋಗ್ಯ ವಿಮೆ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ನೀಡುತ್ತಿಲ್ಲ ಎಂದು ಸಾಮಾಜಿಕ ಹೋರಾಟಗಾರ ಶೇಖರ್ ಲಾಯಿಲ ಅಧ್ಯಕ್ಷರ ಗಮನಕ್ಕೆ ತಂದರು.
ಇದಕ್ಕೆ ಪ್ರತಿಕ್ರಿಯಿಸಿದ ತಾ.ಪಂ. ಸಹಾಯಕ ನಿರ್ದೇಶಕ (ಆಡಳಿತ) ಗಣೇಶ್ ಶೆಟ್ಟಿ ಹಾಗೂ ಸ್ವಚ್ಛ ಭಾರತ್ ಮಿಷನ್‌ನ ನೋಡೆಲ್ ಅಧಿಕಾರಿ ಪ್ರಿಯಾ ಹೆಗ್ಡೆ, ಸರ್ಕಾರದ ನಿಯಮಾವಳಿಗಳಂತೆ ಗ್ರಾಮ ಪಂಚಾಯತ್‌ಗಳ ಸ್ವಚ್ಛತಾ ಕಾರ್ಯವನ್ನು ಸಂಜೀವಿನಿ ಒಕ್ಕೂಟ ನಿರ್ವಹಿಸುತ್ತಿದ್ದು, ಕಾರ್ಮಿಕರಿಗೆ ಒಕ್ಕೂಟವೇ ವೇತನ ನೀಡುತ್ತಿದೆ ಎಂದು ತಿಳಿಸಿದರು.

ಮಧ್ಯಪ್ರವೇಶಿಸಿದ ಶೇಖರ್ ಲಾಯಿಲ, ವೇಣೂರು ಸೇರಿದಂತೆ ತಾಲೂಕಿನ ಹಲವು ಗ್ರಾಮ ಪಂಚಾಯತ್‌ಗಳಲ್ಲಿ ಕೆಲ ತಿಂಗಳ ಹಿಂದೆ ಸ್ವಚ್ಛತಾ ಕಾರ್ಮಿಕರಿಗೆ ₹11,700 ವೇತನ ನೀಡಲಾಗುತ್ತಿತ್ತು. ಇದೀಗ ಅದೇ ಕಾರ್ಮಿಕರಿಗೆ ಕೇವಲ ₹7,000 ವೇತನ ನೀಡಲಾಗುತ್ತಿದೆ. ಬೆಲೆ ಏರಿಕೆಗೆ ಅನುಗುಣವಾಗಿ ವೇತನ ಪರಿಷ್ಕರಣೆ ಮಾಡದಿದ್ದರೆ ಕಾರ್ಮಿಕರು ಜೀವನ ನಡೆಸುವುದು ಹೇಗೆ ಎಂದು ಪ್ರಶ್ನಿಸಿದರು.

ಈ ಬಗ್ಗೆ ಮಾತನಾಡಿದ ಪಿ. ರಘು, ಸ್ವಚ್ಛತಾ ಕಾರ್ಮಿಕರ ಕಾನೂನು ಹಾಗೂ ಸೌಲಭ್ಯಗಳಲ್ಲಿ ಸಮಗ್ರ ಬದಲಾವಣೆ ತರಲು ಮುಖ್ಯಮಂತ್ರಿ ಸೇರಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ನಗರಾಭಿವೃದ್ಧಿ ಸಚಿವರನ್ನು ಭೇಟಿಯಾಗಿ ಚರ್ಚಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳ ಪಂಚಾಯತ್‌ನ ದಿನೇಶ್, ಕುಕ್ಕೇಡಿ ಪಂಚಾಯತ್‌ನ ರೇಣುಕಾ, ವೇಣೂರು ಪಂಚಾಯತ್‌ನ ಶೀನ ಸೇರಿದಂತೆ ಹಲವು ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಅಧ್ಯಕ್ಷರ ಮುಂದೆ ತೋಡಿಕೊಂಡರು. ಎಲ್ಲಾ ಅಹವಾಲುಗಳನ್ನು ಗಂಭೀರವಾಗಿ ಆಲಿಸಿದ ಪಿ. ರಘು, ಸಮಸ್ಯೆಗಳನ್ನು ಶೀಘ್ರ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶೇಖರ್ ಕುಕ್ಕೇಡಿ, ತಹಶೀಲ್ದಾರ್ ಎಸ್.ಎನ್. ನರಗುಂದ, ಮುಖ್ಯಾಧಿಕಾರಿ ಕೆ. ರಾಜೇಶ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಧನಂಜಯ, ತಾ.ಪಂ. ಸಹಾಯಕ ನಿರ್ದೇಶಕ (ಆಡಳಿತ) ಗಣೇಶ್ ಶೆಟ್ಟಿ ಹಾಗೂ ಸ್ವಚ್ಛ ಭಾರತ್ ಮಿಷನ್‌ನ ನೋಡೆಲ್ ಅಧಿಕಾರಿ ಪ್ರಿಯಾ ಹೆಗ್ಡೆ ಉಪಸ್ಥಿತರಿದ್ದರು.


