ಧರ್ಮಸ್ಥಳ: ಗ್ರಾಮದ ಅಶೋಕನಗರ ಪರಿಶಿಷ್ಟ ಜಾತಿ ಕಾಲೋನಿಗೆ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ. ರಘು ಸೋಮವಾರ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿದರು.
ಧರ್ಮಸ್ಥಳ ದೇವಸ್ಥಾನ ಹಾಗೂ ವಸತಿಗೃಹಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗುತ್ತಿಗೆ, ಹೊರಗುತ್ತಿಗೆ ಮತ್ತು ಖಾಯಂ ಸ್ವಚ್ಛತಾ ಕಾರ್ಮಿಕರ ಸಭೆ ನಡೆಸಿದ ಬಳಿಕ, ಹೆಚ್ಚಿನ ಸಂಖ್ಯೆಯಲ್ಲಿ ಸ್ವಚ್ಛತಾ ಕಾರ್ಮಿಕರು ವಾಸಿಸುವ ಅಶೋಕನಗರ ಕಾಲೋನಿಗೆ ಅವರು ಭೇಟಿ ನೀಡಿದರು.

ಕಾಲೋನಿಯಲ್ಲಿ ವಾಸಿಸುತ್ತಿರುವವರಿಗೆ ಜಮೀನು ಮಂಜೂರು ಮಾಡಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅನುಮತಿ ನೀಡಿದ್ದರೂ, ತಾಂತ್ರಿಕ ಸಮಸ್ಯೆಗಳ ಕಾರಣ ಸಂಬಂಧಪಟ್ಟ ಅಧಿಕಾರಿಗಳು ದಾಖಲೆಗಳನ್ನು ನೀಡುತ್ತಿಲ್ಲ ಎಂದು ಕಾರ್ಮಿಕರು ಅಧ್ಯಕ್ಷರ ಗಮನಕ್ಕೆ ತಂದರು.
ಈ ಬಗ್ಗೆ ತಕ್ಷಣ ಕ್ರಮಕ್ಕೆ ಸೂಚಿಸಿದ ಪಿ. ರಘು, ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ ಒಂದು ತಿಂಗಳೊಳಗೆ ಜಮೀನಿನ ದಾಖಲೆಗಳನ್ನು ವಿತರಿಸಿ, ವರದಿ ಸಲ್ಲಿಸುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.

ನಿವೇಶನ ರಹಿತರ ಸಮಸ್ಯೆಗಳನ್ನು ಆಲಿಸಿದ ಅವರು, ಸರ್ಕಾರಿ ಜಮೀನು ಗುರುತಿಸಿ ಸುಸಜ್ಜಿತ ಬಡಾವಣೆ ನಿರ್ಮಿಸಿ ಅರ್ಹರಿಗೆ ನಿವೇಶನ ಹಂಚಿಕೆ ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಿದರು.
ಕಾಲೋನಿಯಲ್ಲಿರುವ ಮನೆಗಳ ದುರಸ್ತಿಗೆ ಅನುದಾನ ನೀಡುವ ಜೊತೆಗೆ ಅರ್ಹರಿಗೆ ಹೊಸ ಮನೆ ಮಂಜೂರು ಮಾಡುವ ಕುರಿತು ಮೇಲಾಧಿಕಾರಿಗಳ ಗಮನ ಸೆಳೆಯುವಂತೆ ಧರ್ಮಸ್ಥಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.

ಅಶೋಕನಗರ ಕಾಲೋನಿಯಲ್ಲಿ ಸುಸಜ್ಜಿತ ಚರಂಡಿ ವ್ಯವಸ್ಥೆ ಕಲ್ಪಿಸುವುದು ಹಾಗೂ ಅಗತ್ಯವಿರುವ ಸ್ಥಳಗಳಲ್ಲಿ ತಡೆಗೋಡೆ ನಿರ್ಮಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪಿ. ರಘು ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯ ಹಾಗೂ ಯುವ ಕಾಂಗ್ರೆಸ್ ಉಪಾಧ್ಯಕ್ಷ ಯತೀಶ್ ಧರ್ಮಸ್ಥಳ ಅವರು ಧರ್ಮಸ್ಥಳ ಗ್ರಾಮದಲ್ಲಿ ಸುಸಜ್ಜಿತ ಅಂಬೇಡ್ಕರ್ ಭವನ ಹಾಗೂ ಸಮುದಾಯ ಭವನ ನಿರ್ಮಾಣ ಮಾಡುವ ಅಗತ್ಯವನ್ನು ಅಧ್ಯಕ್ಷರ ಗಮನಕ್ಕೆ ತಂದರು.

ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಮೀನು ಕಾಯ್ದಿರಿಸಿ ಪ್ರಸ್ತಾವನೆ ಸಲ್ಲಿಸಿದರೆ, ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡಲು ಪ್ರಯತ್ನಿಸಲಾಗುವುದು ಎಂದು ಪಿ. ರಘು ಅಧಿಕಾರಿಗಳಿಗೆ ತಿಳಿಸಿದರು.
ಅಶೋಕನಗರ ಕಾಲೋನಿಯ ವಿವಿಧ ಸಮಸ್ಯೆಗಳನ್ನು ಯತೀಶ್ ಧರ್ಮಸ್ಥಳ ಅವರು ಆಯೋಗದ ಅಧ್ಯಕ್ಷರ ಗಮನಕ್ಕೆ ತಂದು, ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.


