ಬಂಟ್ವಾಳ: ಸಿದ್ಧಕಟ್ಟೆ ಕೊಡಂಗೆ ಗ್ರಾಮದ ವೀರ-ವಿಕ್ರಮ ಜೋಡುಕರೆ ಕಂಬಳ ಕರೆಯಲ್ಲಿ ಓಟದ ಕೋಣಗಳ ತರಬೇತಿಗಾಗಿ ಪ್ರತೀ ಶನಿವಾರ ಮತ್ತು ಭಾನುವಾರ ‘ಕುದಿ ಕಂಬಳ’ ನಡೆಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಸುಸಜ್ಜಿತ ಕಂಬಳ ಕರೆಯಲ್ಲಿ ಈ ಎರಡು ದಿನಗಳಂದು ನೀರು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಸಿದ್ಧಪಡಿಸಲಾಗುತ್ತಿದ್ದು, ಓಟದ ಕೋಣಗಳಿಗೆ ಅಭ್ಯಾಸ ನಡೆಸಲು ಅನುಕೂಲವಾಗಲಿದೆ. ಕೋಣಗಳ ಯಜಮಾನರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಕಳೆದ ಮೂರು ವರ್ಷಗಳ ಹಿಂದೆ ನಿರ್ಮಾಣಗೊಂಡಿರುವ ಕೊಡಂಗೆ ವೀರ-ವಿಕ್ರಮ ಜೋಡುಕರೆ ಕಂಬಳ ಕರೆ ಈಗಾಗಲೇ ಕೇವಲ ಮೂರು ವರ್ಷಗಳ ಅವಧಿಯಲ್ಲಿ ಆರು ಕಂಬಳಗಳನ್ನು ಯಶಸ್ವಿಯಾಗಿ ಆಯೋಜಿಸಿದ ಹೆಗ್ಗಳಿಕೆ ಹೊಂದಿದೆ ಎಂದು ಜಿಲ್ಲಾ ಕಂಬಳ ಸಮಿತಿ ಕೋಶಾಧಿಕಾರಿ ಹಾಗೂ ಕೊಡಂಗೆ ಕಂಬಳ ಸಮಿತಿ ಅಧ್ಯಕ್ಷ ಸಂದೀಪ್ ಶೆಟ್ಟಿ ಪೊಡುಂಬ ತಿಳಿಸಿದ್ದಾರೆ.





