ಬಂಟ್ವಾಳ: ಬಂಟ್ವಾಳ ತಾಲೂಕು ಮೂಡನಡುಗೋಡು ಗ್ರಾಮದ ಕರೆಂಕಿಯಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಸೇವಾ ಚಾರಿಟೇಬಲ್ ರಿ. ವತಿಯಿಂದ 19ನೇ ವರ್ಷದ ಗಣೇಶ ಚತುರ್ಥಿ ಪ್ರಯುಕ್ತ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.

ಶ್ರೀ ಕ್ಷೇತ್ರ ಕರೆಂಕಿಯ ವಠಾರದಲ್ಲಿ ನಡೆದ ಕಾರ್ಯಕ್ರಮದ ಅಂಗವಾಗಿ ದೇವಸ್ಥಾನದಲ್ಲಿ ಶ್ರೀ ಮಹಾಗಣಪತಿ ದೇವರಿಗೆ ಗಣಹೋಮ, ಅಪ್ಪದ ಪೂಜೆ ಹಾಗೂ ವಿಶೇಷ ಪಂಚಕಜ್ಜಾಯ ಸೇವೆ ನೆರವೇರಿಸಲಾಯಿತು. ಶ್ರೀ ದುರ್ಗಾ ಪರಮೇಶ್ವರಿ ಅಮ್ಮನವರಿಗೆ ನಿತ್ಯ ಪೂಜೆ ನಡೆದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳಿಗೆ ಚಾಲನೆ ನೀಡಲಾಯಿತು. ಶ್ರೀ ಕ್ಷೇತ್ರದ ಅರ್ಚಕ ಗುರುರಾಜ್ ಭಟ್ ಅವರು ಸ್ಪರ್ಧೆಗಳನ್ನು ಉದ್ಘಾಟಿಸಿದರು.

ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ವಿವಿಧ ಮನರಂಜನಾ ಹಾಗೂ ಕ್ರೀಡಾ ಸ್ಪರ್ಧೆಗಳು ನಡೆದವು. ಕರೆಂಕಿ ಮೈದಾನದಲ್ಲಿ ಕಬಡ್ಡಿ, ಹಗ್ಗಜಗ್ಗಾಟ ಹಾಗೂ ವಾಲಿಬಾಲ್ ಪಂದ್ಯಾಟಗಳು ಕ್ರೀಡಾಭಿಮಾನಿಗಳ ಗಮನ ಸೆಳೆದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಣಮ್ ಪಿ. ಕರೆಂಕಿ ಹಾಗೂ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ನಿಶಾಂತ್ ಕೊಂಬ್ರಬೈಲ್ ಬಂಟ್ವಾಳ ಅವರನ್ನು ಸನ್ಮಾನಿಸಲಾಯಿತು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಸಂಘ ವಾಮದಪದವು ಇದರ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಬಂಟ್ವಾಳ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಕರುಣೇಂದ್ರ ಪೂಜಾರಿ ಕೊಂಬ್ರಬೈಲ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಜೊತೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಕುದನೆ, ಶ್ರೀ ಕುಪ್ಪೆಟ್ಟು ಧರ್ಮದೈವಗಳ ಚಾವಡಿ ಕಾಂಜಿಲ್ ಕೋಡಿ ಇದರ ಧರ್ಮದರ್ಶಿ ಸತೀಶ್ ಪೂಜಾರಿ ಕಾಂಜಿಲ್ ಕೋಡಿ, ಪ್ರಗತಿಪರ ಕೃಷಿಕ ಪದ್ಮನಾಭ ಗೌಡ ಮಣಿ, ಹಿರಿಯರಾದ ನಾರಾಯಣ ಗೌಡ ಕರೆಂಕಿ, ಪಂಜಿಕಲ್ಲು ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಪೂವಪ್ಪ ಮೆಂಡನ್ ಕರೆಂಕಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಡನಡುಗೋಡು ಬಿ ಒಕ್ಕೂಟದ ಅಧ್ಯಕ್ಷ ವಿನೋದ್ ಕುಮಾರ್ ಕರೆಂಕಿ, ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ವಿಠಲ ಡಿ. ದೇವಿನಗರ, ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಗಂಗಾಧರ ಕುಲಾಲ್ ನೆಕ್ಕರೆ ಹಾಗೂ ಶ್ರೀ ದುರ್ಗಾ ಮಹಿಳಾ ಸಮಿತಿ ಕರೆಂಕಿ ಅಧ್ಯಕ್ಷೆ ಲೀಲಾವತಿ ಸುಂದರ ಕುಲಾಲ್ ಕರೆಂಕಿ ಉಪಸ್ಥಿತರಿದ್ದರು.

ಸಮಾರೋಪ ಸಮಾರಂಭದ ಬಳಿಕ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಂತರ ಟೀಮ್ ವಿಪ್ಲವ ಅರ್ಪಿಸುವ ಕಲಾಮಾತಾ ಕಲಾವಿದರು ಬಂಟ್ವಾಳ ತಂಡದ ವತಿಯಿಂದ ವಿಭಿನ್ನ ಶೈಲಿಯ ‘ಕಥೆ ಕೇನ್ಲೆ’ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
ಧೀರಾಜ್ ಮಣಿ ಸ್ವಾಗತಿಸಿದರು. ಧನುಷ್ ಟಿ. ಕ್ಲಬ್ನ ವಾರ್ಷಿಕ ವರದಿ ವಾಚಿಸಿದರು. ಆನಂದ ಕೆ. ಕರೆಂಕಿ ಕಾರ್ಯಕ್ರಮ ನಿರೂಪಿಸಿದರು.


