Breaking
20 Jun 2026, Sat

ಟ್ರೆಕಿಂಗ್ ವೇಳೆ ದುರಂತ: ನಿಶ್ಚಿತ ವಧುವಿನ ಎದುರೇ 400 ಅಡಿ ಕಂದಕಕ್ಕೆ ಬಿದ್ದು ಪುಣೆ ಯುವಕ ಸಾವು

ಪುಣೆ: ಮದುವೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವಾಗ ನಿಶ್ಚಿತ ವಧು ಹಾಗೂ ಸ್ನೇಹಿತರೊಂದಿಗೆ ಟ್ರೆಕಿಂಗ್‌ಗೆ ತೆರಳಿದ್ದ 26 ವರ್ಷದ ಯುವಕನೊಬ್ಬ 400 ಅಡಿ ಆಳದ ಕಂದಕಕ್ಕೆ ಬಿದ್ದು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೃತ ಯುವಕನನ್ನು ಕೇತನ್ ವಿಶಾಲ್ ಅಗರ್ವಾಲ್ ಎಂದು ಗುರುತಿಸಲಾಗಿದೆ. ಅವರು ಪುಣೆಯ ಗಹುಂಜೆ ನಿವಾಸಿಯಾಗಿದ್ದು, ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಜೂನ್ 18ರ ಗುರುವಾರ ತಮ್ಮ ಹುಟ್ಟುಹಬ್ಬದ ಮುನ್ನಾದಿನದ ಸಂಭ್ರಮಕ್ಕಾಗಿ ನಿಶ್ಚಿತ ವಧು ಮತ್ತು ಇಬ್ಬರು ಸ್ನೇಹಿತರೊಂದಿಗೆ ಮಾವಲ್ ತಹಸಿಲ್‌ನಲ್ಲಿರುವ ಲೋಹಗಡ್ ಕೋಟೆಗೆ ಟ್ರೆಕಿಂಗ್‌ಗೆ ತೆರಳಿದ್ದರು. ಬೆಳಗ್ಗೆ ಸುಮಾರು 10:30ರ ವೇಳೆಗೆ ಬಂಡೆಯ ಅಂಚಿನ ಬಳಿ ಛಾಯಾಚಿತ್ರ ತೆಗೆಯುತ್ತಿದ್ದಾಗ ಬಲವಾದ ಗಾಳಿ ಬೀಸಿದ್ದು, ಕೇತನ್ ನಿಯಂತ್ರಣ ಕಳೆದುಕೊಂಡು ಸುಮಾರು 400 ಅಡಿ ಆಳದ ಕಂದಕಕ್ಕೆ ಜಾರಿಬಿದ್ದಿದ್ದಾರೆ.

ಘಟನೆಯ ಕ್ಷಣವನ್ನು ಅವರ ನಿಶ್ಚಿತ ವಧು ಹಾಗೂ ಸ್ನೇಹಿತರು ಕಣ್ಣಾರೆ ನೋಡಬೇಕಾದ ಪರಿಸ್ಥಿತಿ ಎದುರಾಯಿತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಶಿವದುರ್ಗ ಮಿತ್ರ ತುರ್ತು ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಕಡಿದಾದ ಪ್ರದೇಶ ಹಾಗೂ ದಟ್ಟ ಗಿಡಗಂಟಿಗಳ ನಡುವೆ ಸುಮಾರು ಮೂರು ಗಂಟೆಗಳ ಕಾರ್ಯಾಚರಣೆ ಬಳಿಕ ಮೃತದೇಹವನ್ನು ಹೊರತೆಗೆದಿದ್ದಾರೆ.

ಕೇತನ್ ಅವರ ವಿವಾಹ ನವೆಂಬರ್‌ನಲ್ಲಿ ನಿಗದಿಯಾಗಿದ್ದು, ಎರಡೂ ಕುಟುಂಬದವರು ಮದುವೆ ಸಿದ್ಧತೆಗಳನ್ನು ಆರಂಭಿಸಿದ್ದು, ಈಗಾಗಲೇ ಸಮಾರಂಭಕ್ಕಾಗಿ ಉದಯಪುರದಲ್ಲಿ ಅರಮನೆಯನ್ನು ಕಾಯ್ದಿರಿಸುವುದು ಸೇರಿದಂತೆ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಆಕಸ್ಮಿಕ ಸಾವು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *