Breaking
27 Jul 2026, Mon

ಚೀನಾಕ್ಕೆ ನೌಲ್ ಚಂಡಮಾರುತ ಅಪ್ಪಳಿಕೆ: 3.4 ಲಕ್ಷಕ್ಕೂ ಹೆಚ್ಚು ಜನರ ಸ್ಥಳಾಂತರ, 150ಕ್ಕೂ ಹೆಚ್ಚು ವಿಮಾನ ರದ್ದು

ಬೀಜಿಂಗ್: ಚೀನಾದಲ್ಲಿ ಭಾನುವಾರ ಮುಂಜಾನೆ ನೌಲ್ ಚಂಡಮಾರುತ ಅಪ್ಪಳಿಸಿದ್ದು, ಹಾಂಕಾಂಗ್ ಸೇರಿದಂತೆ ದಕ್ಷಿಣ ಚೀನಾದ ಹಲವು ಭಾಗಗಳಲ್ಲಿ ಭಾರೀ ಗಾಳಿ ಮತ್ತು ಮಳೆಯಾಗಿದೆ. ಚಂಡಮಾರುತದ ಪರಿಣಾಮವಾಗಿ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ 3.4 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 150ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ರೈಲು ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ.

ಚೀನಾದ ರಾಷ್ಟ್ರೀಯ ಹವಾಮಾನ ಕೇಂದ್ರದ ಪ್ರಕಾರ, ನೌಲ್ ಚಂಡಮಾರುತವು ಭಾನುವಾರ ಸ್ಥಳೀಯ ಸಮಯ ಬೆಳಗಿನ 3:50ಕ್ಕೆ ಗುವಾಂಗ್ಡಾಂಗ್ ಪ್ರಾಂತ್ಯದ ಹುಯಿಝೌ ನಗರದ ಹುಯಿಡಾಂಗ್ ಕೌಂಟಿ ಕರಾವಳಿಗೆ ಅಪ್ಪಳಿಸಿತು. ಭೂಮಿಗೆ ಅಪ್ಪಳಿಸುವ ವೇಳೆ ಗಂಟೆಗೆ ಸುಮಾರು 145 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿದ್ದು, ಚಂಡಮಾರುತವು ಒಳನಾಡಿನತ್ತ ಚಲಿಸುತ್ತಾ ಕ್ರಮೇಣ ದುರ್ಬಲಗೊಳ್ಳುವ ಸಾಧ್ಯತೆಯಿದೆ.

ರಾಜ್ಯ ಮಾಧ್ಯಮ ಸಿಸಿಟಿವಿ ವರದಿ ಪ್ರಕಾರ, ಶನಿವಾರ ಮಧ್ಯಾಹ್ನದ ವೇಳೆಗೆ 3.4 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಭಾನುವಾರ ಗುವಾಂಗ್ಡಾಂಗ್ ಪ್ರಾಂತ್ಯದ ಹಲವು ರೈಲು ಸೇವೆಗಳನ್ನೂ ರದ್ದುಗೊಳಿಸಲಾಗಿದೆ.

ಹಾಂಕಾಂಗ್ ವೀಕ್ಷಣಾಲಯವು ಮುಂದಿನ ದಿನಗಳಲ್ಲಿಯೂ ಭಾರೀ ಮಳೆ ಹಾಗೂ ಬಲವಾದ ಗಾಳಿ ಮುಂದುವರಿಯುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹಾಂಕಾಂಗ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶನಿವಾರ ಹಾಗೂ ಭಾನುವಾರ 150ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ.

ಇದೇ ವೇಳೆ, ಹಾಂಕಾಂಗ್‌ನಲ್ಲಿ ಎತ್ತರದ ಕಟ್ಟಡವೊಂದರ ಮೇಲಿದ್ದ ದೊಡ್ಡ ಸ್ಕ್ಯಾಫೋಲ್ಡಿಂಗ್‌ನ ಭಾಗಗಳು ಕುಸಿದು ಬಿದ್ದಿದ್ದು, ಅದೃಷ್ಟವಶಾತ್ ಯಾವುದೇ ಗಾಯಗಳಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ನೌಲ್ ಚಂಡಮಾರುತದ ಪರಿಣಾಮ ದಕ್ಷಿಣ ಮತ್ತು ಪೂರ್ವ ತೈವಾನ್‌ನ ಕೆಲವು ಭಾಗಗಳಲ್ಲಿಯೂ ಮಳೆಯಾಗುತ್ತಿದೆ ಎಂದು ತೈವಾನ್ ಕೇಂದ್ರ ಹವಾಮಾನ ಆಡಳಿತ ತಿಳಿಸಿದೆ. ಚಂಡಮಾರುತವು ತೈವಾನ್‌ನ ದಕ್ಷಿಣ ಭಾಗದ ಸಮುದ್ರ ಮಾರ್ಗವಾಗಿ ಸಾಗಿದ್ದು, ಬಳಿಕ ದ್ವೀಪದಿಂದ ದೂರ ಸರಿದಿದೆ.

ಈ ತಿಂಗಳ ಆರಂಭದಲ್ಲಿ ಬಾವಿ ಚಂಡಮಾರುತದಿಂದ ಪೂರ್ವ ಚೀನಾದಲ್ಲಿ 20 ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿತ್ತು. ಅದಕ್ಕೂ ಮುನ್ನ ಮೇಸಾಕ್ ಚಂಡಮಾರುತವೂ ದಕ್ಷಿಣ ಚೀನಾದಲ್ಲಿ ವ್ಯಾಪಕ ಹಾನಿ ಉಂಟುಮಾಡಿತ್ತು.

Leave a Reply

Your email address will not be published. Required fields are marked *