Breaking
27 Jul 2026, Mon

ದೇವಸ್ಥಾನ ಕಳವು ಪ್ರಕರಣ ಭೇದಿಸಿದ ಬಂಟ್ವಾಳ ಪೊಲೀಸರು: ಇಬ್ಬರು ಆರೋಪಿಗಳ ಬಂಧನ

ಬಂಟ್ವಾಳ: ಬಿ.ಸಿ.ರೋಡು ಸಮೀಪದ ಮೊಡಂಕಾಪುವಿನ ಶ್ರೀ ಆದಿಶಕ್ತಿ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಡೆದ ಕಳವು ಹಾಗೂ ಕಳವು ಯತ್ನ ಪ್ರಕರಣವನ್ನು ಬಂಟ್ವಾಳ ನಗರ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಕುಂಬ್ಳೆ ನಿವಾಸಿ ಸುರೇಶ್ ಹಾಗೂ ಶಾಂತಿಯಂಗಡಿ ನಿವಾಸಿ ಅಬ್ದುಲ್ ರಝಾಕ್ ಎಂದು ಗುರುತಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಕೆಲ ದಿನಗಳ ಹಿಂದೆ ದೇವಸ್ಥಾನದಲ್ಲಿ ಭಕ್ತರು ಸುಮಾರು ನಾಲ್ಕು ದಶಕಗಳಿಂದ ಸಮರ್ಪಿಸಿದ್ದ ತಾಮ್ರ ಹಾಗೂ ಪಿತ್ತಳದ ಪೂಜಾ ಪರಿಕರಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು. ಕಳವಾದ ವಸ್ತುಗಳಲ್ಲಿ ಹಳೆಯ ಕೊಪ್ಪರಿಗೆ, ಆರು ದೀಪಗಳು, ಸುಮಾರು 20 ಗಿಂಡೆಗಳು, ಹರಿವಾಣ ತಟ್ಟೆ, ಭಜನಾ ತಾಳ, ತಾಮ್ರದ ಕೊಡಪಾನ, ತಾಮ್ರದ ಅಕ್ಕಿ ಸೋಸುವ ಪಾತ್ರೆ ಸೇರಿದಂತೆ ಹಲವು ಪೂಜಾ ಸಾಮಗ್ರಿಗಳು ಸೇರಿದ್ದವು.

ಘಟನೆಯ ವೇಳೆ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಮೂವರು ವ್ಯಕ್ತಿಗಳು ಗೋಣಿಯಲ್ಲಿ ಪೂಜಾ ಸಾಮಗ್ರಿಗಳನ್ನು ತುಂಬಿಕೊಂಡು ಸಾಗುತ್ತಿರುವ ದೃಶ್ಯಗಳು ಸೆರೆಯಾಗಿದ್ದವು. ಅಲ್ಲದೆ, ದೇವಸ್ಥಾನ ಆವರಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಕೆಲವರನ್ನು ಸ್ಥಳೀಯರು ಪ್ರಶ್ನಿಸಿದಾಗ, ದೇವಸ್ಥಾನದ ಪರವಾಗಿ ಕೆಲಸಕ್ಕೆ ಬಂದಿರುವುದಾಗಿ ಅವರು ತಿಳಿಸಿದ್ದರು ಎನ್ನಲಾಗಿದೆ.

ಬಳಿಕ ದೇವಸ್ಥಾನದ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ವಿಚಾರಿಸಿದಾಗ, ಅಂತಹ ಯಾವುದೇ ಕೆಲಸಕ್ಕೆ ಯಾರನ್ನೂ ನಿಯೋಜಿಸಿಲ್ಲ ಎಂಬುದು ದೃಢಪಟ್ಟಿತ್ತು. ನಂತರ ಸ್ಥಳೀಯರು ದೇವಸ್ಥಾನದಲ್ಲಿ ಪರಿಶೀಲನೆ ನಡೆಸಿದ ವೇಳೆ, ಅನ್ನಪಾತ್ರೆಗಳನ್ನು ಗೋಣಿಯಲ್ಲಿ ತುಂಬಿಸಿಡಲಾಗಿದ್ದು, ಗೋದ್ರೆಜ್ ಕಪಾಟುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಪತ್ತೆಯಾಗಿತ್ತು.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಕಲೆಹಾಕುವ ಕಾರ್ಯ ಮುಂದುವರಿದಿದೆ.

Leave a Reply

Your email address will not be published. Required fields are marked *