ಬಂಟ್ವಾಳ: ದೇವಸ್ಯಮೂಡೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿಗಾಗಿ ಎಸ್‌ಡಿಎಂಸಿ ಅಧ್ಯಕ್ಷ ವಸಂತ ಮುದಿಮಾರ್ ಹಾಗೂ ಸದಸ್ಯರು ದಸರಾ ಸಂದರ್ಭದಲ್ಲಿ ಅಜ್ಜಿ ವೇಷ ಧರಿಸಿ ಹಾಸ್ಯ ಪ್ರಹಸನದ ಮೂಲಕ ಸಂಗ್ರಹಿಸಿದ ₹1 ಲಕ್ಷವನ್ನು ಶಾಲೆಗೆ ಹಸ್ತಾಂತರಿಸಿದ್ದಾರೆ.

2026ರ ಅಕ್ಟೋಬರ್ 11ರಿಂದ 21ರವರೆಗೆ ವಸಂತ ಮುದಿಮಾರ್ ಹಾಗೂ ಅವರ ಬಳಗ ಅಜ್ಜಿ ವೇಷ ಧರಿಸಿ ಪರಿಸರದ ಮನೆಗಳಿಗೆ ಭೇಟಿ ನೀಡಿ ಹಾಸ್ಯ ಪ್ರಹಸನ ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದರು. ಈ ಮೂಲಕ ಸಂಗ್ರಹಿಸಿದ ಹಣವನ್ನು ಶಾಲೆಯ ಅಭಿವೃದ್ಧಿ ಕಾರ್ಯಗಳಿಗೆ ನೀಡುವ ಮೂಲಕ ಮಾದರಿ ಸೇವೆ ಸಲ್ಲಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ಈ ಬಳಗ ದಸರಾ ವೇಷ ಧರಿಸಿ ಹಣ ಸಂಗ್ರಹಿಸಿ ಶಾಲೆಯ ಅಭಿವೃದ್ಧಿಗೆ ಕೊಡುಗೆ ನೀಡುತ್ತಿದ್ದು, ಈವರೆಗೆ ಒಟ್ಟು ₹2,40,742 ಹಣವನ್ನು ಶಾಲೆಗೆ ನೀಡಿದ್ದಾರೆ.

ಈ ಹಣವನ್ನು ಶಾಲೆಯ ಆಟದ ಮೈದಾನದ ವಿಸ್ತರಣೆ, ಸಿಂಟೆಕ್ಸ್ ಅಳವಡಿಕೆ, ಪೈಪ್‌ಲೈನ್ ವ್ಯವಸ್ಥೆ, ಶೌಚಾಲಯ ಹಾಗೂ ಮೂತ್ರಾಲಯಗಳ ನಿರ್ಮಾಣ ಮತ್ತು ಗೌರವ ಶಿಕ್ಷಕರಿಗೆ ಗೌರವಧನ ನೀಡುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗಿದೆ.

ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕರಾದ ಅರ್ಜುನ್ ಬಂಡಾರ್ಕರ್ ಈ ತಂಡಕ್ಕೆ ಹೆಚ್ಚಿನ ರೀತಿಯಲ್ಲಿ ಆರ್ಥಿಕವಾಗಿ ಸಹಕಾರ ನೀಡುವುದರ ಜೊತೆಗೆ ಈ ತಂಡಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಶಾಲೆಯ ಅಭಿವೃದ್ಧಿಗೆ ನಿರಂತರವಾಗಿ ಸಹಕಾರ ನೀಡುತ್ತಿರುವ ಎಸ್‌ಡಿಎಂಸಿ ಅಧ್ಯಕ್ಷ ವಸಂತ ಮುದಿಮಾರ್ ಹಾಗೂ ಸಮಿತಿಯ ಎಲ್ಲಾ ಸದಸ್ಯರ ಸೇವೆ ಶ್ಲಾಘನೀಯವಾಗಿದೆ. ಇವರ ಸಮಾಜಮುಖಿ ಕಾರ್ಯಕ್ಕೆ ಶಾಲೆಯ ಮುಖ್ಯ ಶಿಕ್ಷಕಿ, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹೃತ್ಪೂರ್ವಕ ಅಭಿನಂದನೆ ಮತ್ತು ಕೃತಜ್ಞತೆ ಸಲ್ಲಿಸಿದ್ದಾರೆ.



