ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಹಿಂದಿರುಗಿಸುವ ವಿಚಾರಕ್ಕೆ ಸಂಬಂಧಿಸಿದ ವಿವಾದ ವಿಕೋಪಕ್ಕೆ ತಿರುಗಿದ್ದು, ಎಂಬ್ರಾಯಿಡರಿ ಅಂಗಡಿ ಮಾಲೀಕನ ಮೇಲೆ ಆಸಿಡ್ ಎರಚಿ ಹಲ್ಲೆ ನಡೆಸಿರುವ ಘಟನೆ ಉಡುಪಿ ನಗರದ ಇಂದ್ರಾಳಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದವರನ್ನು ಉಡುಪಿ ಸಮೀಪದ ಬುಡ್ನಾರು ನಿವಾಸಿ ನವೀನ್ ಕುಮಾರ್ ಎಂದು ಗುರುತಿಸಲಾಗಿದೆ. ಸುರೇಶ್ ಆಚಾರ್ಯ ಎಂಬಾತ ಹಲ್ಲೆ ನಡೆಸಿದ ಆರೋಪಿಯಾಗಿದ್ದಾನೆ.

ಠೇವಣಿ ಹಣದ ವಿಚಾರವಾಗಿ ಸುರೇಶ್ ಆಚಾರ್ಯ, ನವೀನ್ ಕುಮಾರ್ ಅವರ ಅಂಗಡಿಗೆ ತೆರಳಿ ಹಣ ನೀಡುವಂತೆ ಒತ್ತಾಯಿಸಿದ್ದಾನೆ ಎನ್ನಲಾಗಿದೆ. ನವೀನ್ ಕುಮಾರ್ ಹಣ ನೀಡಲು ಒಪ್ಪದಿದ್ದಾಗ, ಕಾರಿನಲ್ಲಿದ್ದ ಮಚ್ಚು ಹಾಗೂ ಆಸಿಡ್ ಬಾಟಲಿಯನ್ನು ತಂದು ಮತ್ತೆ ಹಣ ನೀಡುವಂತೆ ಕೇಳಿದ್ದಾನೆ.
ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಏಕಾಏಕಿ ಸುರೇಶ್ ಆಚಾರ್ಯ ನವೀನ್ ಕುಮಾರ್ ಮೇಲೆ ಆಸಿಡ್ ಎರಚಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.



