ಪುಂಜಾಲಕಟ್ಟೆ: ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ. ಅನುದಾನದ ಕೊರತೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿದ್ದು, ಅರ್ಹ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಸೌಲಭ್ಯವೂ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ತುಂಗಪ್ಪ ಬಂಗೇರ ಆರೋಪಿಸಿದರು.

ಬಂಟ್ವಾಳ ತಾಲ್ಲೂಕಿನ ಪುಂಜಾಲಕಟ್ಟೆ ನಾಗರಿಕ ಹಿತರಕ್ಷಣಾ ಸಮಿತಿ ವತಿಯಿಂದ ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಖಂಡಿಸಿ ಮಂಗಳವಾರ ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಎದುರು ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಕೊರಗ ಸಮುದಾಯಕ್ಕೆ ನೀಡಲಾಗುತ್ತಿದ್ದ ಪೌಷ್ಟಿಕ ಆಹಾರ ದೊರೆಯದೆ ಎಂಟು ತಿಂಗಳು ಕಳೆದಿದೆ. ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಪಾವತಿಯಾಗುತ್ತಿಲ್ಲ. ಸಂಧ್ಯಾ ಸುರಕ್ಷಾ ಸೇರಿದಂತೆ ವಿವಿಧ ಪಿಂಚಣಿಗಳು ಸ್ಥಗಿತಗೊಂಡಿವೆ. ವಿದ್ಯುತ್ ಬಿಲ್‌ಗಳು ದುಪ್ಪಟ್ಟಾಗಿವೆ. ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಪರಿಹಾರ ವಿತರಿಸುವಲ್ಲಿಯೂ ತಾರತಮ್ಯ ಮಾಡಲಾಗುತ್ತಿದೆ ಎಂದು ಅವರು ಆರೋಪಿಸಿದರು.

ಸಮಿತಿ ಅಧ್ಯಕ್ಷ ಶಂಕರ್ ಶೆಟ್ಟಿ ಬೆದ್ರಮಾರು ಮಾತನಾಡಿ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಹೊರತುಪಡಿಸಿ ಉಳಿದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಆರೋಪಿಸಿದರು. ಹೊಸ ಪಡಿತರ ಚೀಟಿ ವಿತರಿಸದೆ ಹತ್ತು ವರ್ಷಗಳು ಕಳೆದಿವೆ. ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಧಾರಗಳೂ ಅನುಷ್ಠಾನಗೊಂಡಿಲ್ಲ ಎಂದು ದೂರಿದರು.

ಉದ್ಯಮಿ ಟಿ. ಹರೀಂದ್ರ ಪೈ ನೈನಾಡು ಮಾತನಾಡಿ, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗದಿದ್ದರೆ ಸರ್ಕಾರ ವಿಸರ್ಜಿಸಿ ಚುನಾವಣೆ ಎದುರಿಸಲಿ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ. ಬೂಬ ಸಪಲ್ಯ ಮುಂಡಬೈಲು, ಹರೀಶ್ ಶೆಟ್ಟಿ ನೈನಾಡು, ಚಂದ್ರಶೇಖರ ಶೆಟ್ಟಿ, ತಾರಾನಾಥ ಪೂಜಾರಿ ಕಜೆಕಾರು, ಶೇಖರ ಪೂಜಾರಿ ಅಗಲ್ತೊಡಿ, ಕಾಂತಪ್ಪ ಪೂಜಾರಿ, ಚಂದಪ್ಪ ಕಜೆಕಾರು, ರವಿಶಂಕರ ಹೊಳ್ಳ, ಶಶಿಧರ ನಾಯ್ಕ, ಸತೀಶ್ ಕೊರಗ, ಶೇಷಗಿರಿ ಪೂಜಾರಿ, ರಮೇಶ ಶೆಟ್ಟಿ ಮಜಲೋಡಿ, ಯಶೋಧರ್, ನಾರಾಯಣ ಪೂಜಾರಿ, ಜಯಶ್ರೀ, ಸುಶೀಲ, ಮಮತಾ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಬಳಿಕ ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ವನಜ ಅವರಿಗೆ ಮನವಿ ಸಲ್ಲಿಸಿದರು.


