ಬಂಟ್ವಾಳ: ಪಾಣೆಮಂಗಳೂರು ಸಮೀಪದ ಬೋಳಂಗಡಿಯ 27 ವರ್ಷದ ಯುವಕನೊಬ್ಬ ಕೆಲಸಕ್ಕೆಂದು ಕೇರಳಕ್ಕೆ ತೆರಳಿದ ಬಳಿಕ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬಂಟ್ವಾಳ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.

ನಾಪತ್ತೆಯಾದ ಯುವಕನನ್ನು ಬೋಳಂಗಡಿಯ ಸಂತೋಷ್ ಎಂದು ಗುರುತಿಸಲಾಗಿದೆ. ಇವರು ಕೆಂಪುಕಲ್ಲಿನ ಲಾರಿಗಳಲ್ಲಿ ಲೋಡರ್ ಆಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.

ಮೇ 1ರಂದು ಬೆಳಿಗ್ಗೆ ಮನೆಯಿಂದ ಹೊರಟಿದ್ದ ಸಂತೋಷ್, ಕೆಲಸದ ನಿಮಿತ್ತ ಕೇರಳಕ್ಕೆ ತೆರಳುತ್ತಿರುವುದಾಗಿ ಕುಟುಂಬದವರಿಗೆ ತಿಳಿಸಿದ್ದರು. ಅಲ್ಲದೆ, ಎರಡು ತಿಂಗಳ ಬಳಿಕ ಮನೆಗೆ ವಾಪಸಾಗುವುದಾಗಿ ಹೇಳಿದ್ದರೆಂದು ತಿಳಿದುಬಂದಿದೆ.

ಆದರೆ, ಅಂದಿನಿಂದ ಈವರೆಗೆ ಸಂತೋಷ್ ಮನೆಗೆ ಮರಳಿಲ್ಲ. ಕುಟುಂಬದವರನ್ನೂ ದೂರವಾಣಿ ಮೂಲಕ ಸಂಪರ್ಕಿಸಿಲ್ಲ. ಇದರಿಂದ ಆತಂಕಗೊಂಡ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಬಂಟ್ವಾಳ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


