ಕಾಪು: ಕಾಪು ಮತ್ತು ಮಟ್ಟು ಬೀಚ್‌ಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕಾಪು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ₹2.85 ಲಕ್ಷ ಮೌಲ್ಯದ 5.710 ಕೆಜಿ ಗಾಂಜಾ, ₹225 ನಗದು ಹಾಗೂ ಎರಡು ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಕಾಪು ತಾಲೂಕಿನ ಬೆಳಪು ಗ್ರಾಮದ ವಿನಯನಗರ ನಿವಾಸಿ ಆರೀಫ್ (38) ಹಾಗೂ ಉಡುಪಿ ತಾಲೂಕಿನ ಪಡುತೋನ್ಸೆ ಗ್ರಾಮದ ಹೂಡೆಯ ಜಾಮೀಯಾ ಮಸೀದಿ ಬಳಿಯ ನಿವಾಸಿ ಅಕೀಫ್ (34) ಎಂದು ಗುರುತಿಸಲಾಗಿದೆ.

ಅ. 27ರಂದು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರಿಗೆ ಕಾಪು ಮತ್ತು ಮಟ್ಟು ಬೀಚ್‌ಗಳಿಗೆ ಆಗಮಿಸುವ ಪ್ರವಾಸಿಗರಿಗೆ ಇಬ್ಬರು ಗಾಂಜಾ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭಿಸಿತ್ತು. ಉಲಿಯಾರಗೋಳಿ ಗ್ರಾಮದ ಯಾರ್ಡ್ ಬೀಚ್ ಸಮೀಪ ಈ ಚಟುವಟಿಕೆ ನಡೆಯುತ್ತಿರುವುದಾಗಿ ಮಾಹಿತಿ ತಿಳಿಸಿತ್ತು.

ವೃತ್ತ ನಿರೀಕ್ಷಕರ ಸೂಚನೆಯಂತೆ ಕಾಪು ಪೊಲೀಸ್ ಠಾಣೆಯ ಪಿಎಸ್‌ಐ ತೇಜಸ್ವಿ ನೇತೃತ್ವದ ತಂಡ ಮಧ್ಯಾಹ್ನ 12.05ರ ಸುಮಾರಿಗೆ ಸ್ಥಳಕ್ಕೆ ದಾಳಿ ನಡೆಸಿತು. ಈ ವೇಳೆ ಗಾಂಜಾ ಮಾರಾಟಕ್ಕೆ ಸಿದ್ಧತೆ ನಡೆಸಿದ್ದರೆನ್ನಲಾದ ಇಬ್ಬರನ್ನು ಬಂಧಿಸಿ, ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು.

ವಿಚಾರಣೆ ವೇಳೆ ಆರೋಪಿಗಳು ಮಾರಾಟ ಮಾಡುವ ಉದ್ದೇಶದಿಂದ ತೆಲಂಗಾಣದ ಹೈದರಾಬಾದ್‌ನಿಂದ ಗಾಂಜಾ ತಂದಿರುವುದಾಗಿ ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳು ದಾಖಲಾಗಿರುವುದಾಗಿಯೂ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಕಾಪು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 141/2026ರ ಅಡಿಯಲ್ಲಿ ಎನ್‌ಡಿಪಿಎಸ್ ಕಾಯ್ದೆ 1985ರ ಕಲಂ 8(ಸಿ) ಮತ್ತು 20(ಬಿ)(ii)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರ್ಕಳ ಉಪವಿಭಾಗದ ಎಎಸ್ಪಿ ಎಶಿತಾ ಗುಪ್ತಾ ಹಾಗೂ ಕಾಪು ವೃತ್ತ ನಿರೀಕ್ಷಕ ಅಜ್ಮತ್ ಅಲಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ. ಪಿಎಸ್‌ಐ ತೇಜಸ್ವಿ ನೇತೃತ್ವದ ತಂಡದೊಂದಿಗೆ ಕಾರ್ಕಳ ಉಪವಿಭಾಗದ ಎನ್‌ಡಿಪಿಎಸ್ ವಿರೋಧಿ ದಳದ ಸದಸ್ಯರು, ಸಿಡಿಆರ್ ತಾಂತ್ರಿಕ ಸಿಬ್ಬಂದಿ ಹಾಗೂ ಎಸ್‌ಒಸಿಒ ಸಿಬ್ಬಂದಿ ಪಾಲ್ಗೊಂಡಿದ್ದರು. ಪೊಲೀಸ್ ಸಿಬ್ಬಂದಿಗಳಾದ ವಿಕ್ರಮ್ ಬಿ., ಭಾಸ್ಕರ ಆರ್.ಸಿ., ಧರ್ಮಪ್ಪ, ರಘು, ಅನ್ವರ್ ಅಲಿ, ಸ್ವಾಮಿ ಡಿ.ಎಸ್., ಅಖಿಲ್ ಹಾಗೂ ಲೋಕೇಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.



