Breaking
28 Oct 2026, Wed

ಬೈಕಾಡಿಯಲ್ಲಿ ರೌಡಿಶೀಟರ್ ಸುಜಿತ್ ಪಿಂಟೋ ಬರ್ಬರ ಹತ್ಯೆ: ಇಬ್ಬರು ಆರೋಪಿಗಳ ಬಂಧನ

ಬ್ರಹ್ಮಾವರ: ವೈಯಕ್ತಿಕ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ವಿಕೋಪಕ್ಕೆ ತಿರುಗಿ, ರೌಡಿಶೀಟರ್ ಸುಜಿತ್ ಪಿಂಟೋ ಅವರನ್ನು ಸ್ಟೀಲ್ ಪೈಪ್‌ನಿಂದ ತಲೆಗೆ ಹೊಡೆದು ಹತ್ಯೆ ಮಾಡಿರುವ ಘಟನೆ ಅ. 27ರ ರಾತ್ರಿ ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಬೈಕಾಡಿ ಗ್ರಾಮದ ಪಡುಬೈಕಾಡಿ ನಿವಾಸಿಗಳಾದ ಪ್ರದೀಪ್ ಪೂಜಾರಿ (45) ಮತ್ತು ಪ್ರಮೋದ್ ಪೂಜಾರಿ (39) ಎಂದು ಗುರುತಿಸಲಾಗಿದೆ. ಇಬ್ಬರನ್ನೂ ವಶಕ್ಕೆ ಪಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಅ. 27ರಂದು ರಾತ್ರಿ 7.30ರಿಂದ 8.30ರ ನಡುವಿನ ಅವಧಿಯಲ್ಲಿ ಪ್ರದೀಪ್ ಪೂಜಾರಿ ಮತ್ತು ಪ್ರಮೋದ್ ಪೂಜಾರಿ ಅವರು ಅದೇ ಗ್ರಾಮದ ಜೀವನ್ ಪೂಜಾರಿ ಹಾಗೂ ಉಡುಪಿ ಕಲ್ಯಾಣಪುರದ ಸಂತೆಕಟ್ಟೆ ನಿವಾಸಿ ಸುಜಿತ್ ಪಿಂಟೋ ಅವರನ್ನು ಬೈಕಾಡಿ ಗ್ರಾಮದ ಭದ್ರಗಿರಿ ಸರ್ಕಲ್ ಬಳಿ ಕರೆಸಿಕೊಂಡಿದ್ದರು ಎನ್ನಲಾಗಿದೆ.

ಈ ವೇಳೆ ವೈಯಕ್ತಿಕ ವಿಚಾರವಾಗಿ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿದೆ. ಬಳಿಕ ಪರಸ್ಪರ ಕೈಯಿಂದ ಹೊಡೆದಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಸಂದರ್ಭದಲ್ಲಿ ಪ್ರದೀಪ್ ಪೂಜಾರಿ ಅವರು ಸುಜಿತ್ ಪಿಂಟೋ ಅವರನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದು, ಪ್ರಮೋದ್ ಪೂಜಾರಿ ತನ್ನ ಬಳಿ ಇಟ್ಟುಕೊಂಡಿದ್ದ ಸ್ಟೀಲ್ ಪೈಪ್‌ನಿಂದ ಸುಜಿತ್ ಅವರ ತಲೆಗೆ ಪದೇಪದೆ ಬಲವಾಗಿ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಜಗಳ ಬಿಡಿಸಲು ಮಧ್ಯಪ್ರವೇಶಿಸಿದ ಜೀವನ್ ಪೂಜಾರಿ ಅವರ ಮೇಲೂ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಸ್ಟೀಲ್ ಪೈಪ್‌ನಿಂದ ನಡೆದ ಹಲ್ಲೆಯಿಂದ ಸುಜಿತ್ ಪಿಂಟೋ ಅವರ ತಲೆ ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿದ್ದು, ತೀವ್ರ ರಕ್ತಸ್ರಾವದಿಂದ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಯ ಪ್ರತ್ಯಕ್ಷ ಸಾಕ್ಷಿ ಎನ್ನಲಾದ ಜೀವನ್ ಪೂಜಾರಿ (31) ನೀಡಿದ ದೂರಿನ ಆಧಾರದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳಾದ ಪ್ರದೀಪ್ ಪೂಜಾರಿ ಮತ್ತು ಪ್ರಮೋದ್ ಪೂಜಾರಿ ವಿರುದ್ಧ ಈ ಹಿಂದೆ ಅಪರಾಧ ಪ್ರಕರಣಗಳು ದಾಖಲಾಗಿರುವ ಮಾಹಿತಿ ಇಲ್ಲ ಎನ್ನಲಾಗಿದೆ. ಹಣಕಾಸು ಹಾಗೂ ವೈಯಕ್ತಿಕ ವಿಚಾರವೇ ಹತ್ಯೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಮೃತ ಸುಜಿತ್ ಪಿಂಟೋ ಮಲ್ಪೆ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದರು. ಉಡುಪಿ ನಗರ, ಮಲ್ಪೆ, ಹಿರಿಯಡ್ಕ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಅವರ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

Leave a Reply

Your email address will not be published. Required fields are marked *