ಬಂಟ್ವಾಳ: ಗ್ರಾಮೀಣ ಪ್ರದೇಶದ ಕುಶಲಕರ್ಮಿಗಳಿಗೆ ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ಒದಗಿಸುವುದರಿಂದ ಅವರ ವೃತ್ತಿ ಕೌಶಲ ವೃದ್ಧಿಯಾಗುವುದರ ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಬಂಟ್ವಾಳ ಶಾಸಕರ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಪಂಚಾಯತ್‌ನ ಕೈಗಾರಿಕಾ ವಿಭಾಗ, ಯೆಯ್ಯಾಡಿ, ಮಂಗಳೂರು ಇದರ ವತಿಯಿಂದ 2025-26ನೇ ಸಾಲಿನ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣ ಹಾಗೂ ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ಗಾರೆ ಕೆಲಸ, ಬಡಗಿತನ, ಕಮ್ಮಾರಿಕೆ, ವಿದ್ಯುತ್ ಕೆಲಸ ಸೇರಿದಂತೆ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇವರಿಗೆ ಅಗತ್ಯ ಉಪಕರಣಗಳನ್ನು ಒದಗಿಸುವುದರಿಂದ ಕೆಲಸದ ಗುಣಮಟ್ಟ ಹೆಚ್ಚಿಸುವುದರ ಜತೆಗೆ ಆದಾಯ ವೃದ್ಧಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಮಹಿಳೆಯರು ಹೊಲಿಗೆ ತರಬೇತಿ ಪಡೆದು ಸ್ವಂತ ಉದ್ಯೋಗ ಆರಂಭಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಹೊಲಿಗೆ ಯಂತ್ರಗಳ ವಿತರಣೆಯಿಂದ ಮನೆಯಲ್ಲಿಯೇ ಉದ್ಯೋಗ ನಡೆಸಿ ಕುಟುಂಬದ ಆದಾಯಕ್ಕೆ ಕೊಡುಗೆ ನೀಡಲು ಅವಕಾಶ ಕಲ್ಪಿಸಿದಂತಾಗಿದೆ. ಯುವಜನರು ಹಾಗೂ ಮಹಿಳೆಯರು ಕೌಶಲಾಧಾರಿತ ವೃತ್ತಿಗಳಿಗೆ ಆದ್ಯತೆ ನೀಡಿ ಸ್ವಯಂ ಉದ್ಯೋಗದ ಮೂಲಕ ಆರ್ಥಿಕ ಪ್ರಗತಿ ಸಾಧಿಸಬೇಕು. ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕಿನ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವ ಕುಶಲಕರ್ಮಿಗಳು ಹಾಗೂ ತರಬೇತಿ ಪಡೆದ ಮಹಿಳೆಯರಿಗೆ ಉಚಿತ ಉಪಕರಣ ಮತ್ತು ಹೊಲಿಗೆ ಯಂತ್ರಗಳನ್ನು ವಿತರಿಸಲಾಯಿತು.

ಯೋಜನೆಯಡಿ 60 ಗಾರೆ ಕೆಲಸಗಾರರಿಗೆ, 28 ಬಡಗಿಗಳಿಗೆ, 85 ಮಹಿಳೆಯರಿಗೆ ಹೊಲಿಗೆ ಯಂತ್ರಗಳು, 34 ವಿದ್ಯುತ್ ಕೆಲಸಗಾರರಿಗೆ, 15 ಕಮ್ಮಾರರಿಗೆ ಹಾಗೂ 40 ಅಕ್ಕಸಾಲಿಗರಿಗೆ ಉಪಕರಣಗಳನ್ನು ವಿತರಿಸಲಾಯಿತು. ಒಟ್ಟು 262 ಫಲಾನುಭವಿಗಳಿಗೆ ವಿವಿಧ ಸಲಕರಣೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಮಂಗಳೂರು ಗ್ರಾಮೀಣ ಕೈಗಾರಿಕಾ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಹೆಗಡೆ, ಇಲಾಖೆಯ ಸಿಬ್ಬಂದಿ, ಕೈಗಾರಿಕಾ ವಿಭಾಗದ ಅಧಿಕಾರಿಗಳು ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.



