Breaking
27 Oct 2026, Tue

ಇಸ್ರೇಲ್‌ನಲ್ಲಿ ಮಂಗಳೂರಿನ ವ್ಯಕ್ತಿ ನಾಪತ್ತೆ; ಕುಟುಂಬದಲ್ಲಿ ಆತಂಕ, ದೂರು ದಾಖಲು

ಮಂಗಳೂರು: ಉದ್ಯೋಗ ನಿಮಿತ್ತ ಇಸ್ರೇಲ್‌ನಲ್ಲಿದ್ದ ಮಂಗಳೂರು ಸಮೀಪದ ಕಣ್ಣೂರು ಕೊಡಕ್ಕಲ್ ನಿವಾಸಿ ಶಡ್ರಕ್ ಇಮ್ಯಾನುವೆಲ್ (41) ಅವರು ನಾಪತ್ತೆಯಾಗಿದ್ದು, ಅ. 16ರಿಂದ ಕುಟುಂಬದ ಸಂಪರ್ಕಕ್ಕೆ ಸಿಗದೆ ಇರುವುದು ಆತಂಕಕ್ಕೆ ಕಾರಣವಾಗಿದೆ.

ಕಳೆದ ಒಂದೂವರೆ ವರ್ಷದಿಂದ ಇಸ್ರೇಲ್‌ನಲ್ಲಿ ಉದ್ಯೋಗ ಮಾಡುತ್ತಿದ್ದ ಶಡ್ರಕ್, ಆರಂಭದಲ್ಲಿ ಟೆಲ್ ಅವೀವ್‌ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಬಳಿಕ ನಝರೆತ್‌ನ ನೊಫ್ ಹಗಲಿಲ್‌ನಲ್ಲಿರುವ ಯುಸಿಟಿ ಲಿಕ್ವಿಡ್ ಸೊಲ್ಯೂಷನ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು.

ಅ. 16ರಂದು ರಾತ್ರಿ 8.49ಕ್ಕೆ ಪತ್ನಿಗೆ ಸಂದೇಶ ಕಳುಹಿಸಿದ್ದ ಅವರು, ಅದಕ್ಕೂ ಮೊದಲು ಮನೆಯವರೊಂದಿಗೆ ವಿಡಿಯೋ ಕರೆ ಮೂಲಕ ಮಾತನಾಡಿದ್ದರು. ಆದರೆ, ಆ ಬಳಿಕ ಅವರಿಂದ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಅ. 16ರಂದು ದೂರವಾಣಿ ಕರೆ ಮಾಡಿದಾಗ ತಾನು ಪಾರ್ಕ್‌ನಲ್ಲಿರುವುದಾಗಿ ಶಡ್ರಕ್ ತಿಳಿಸಿದ್ದರು. ಅಲ್ಲಿದ್ದ ಖರ್ಜೂರದ ಮರಗಳನ್ನು ವಿಡಿಯೋ ಮೂಲಕ ತೋರಿಸಿದ್ದರು. ಮನೆಯವರೊಂದಿಗೆ ಮಾತನಾಡುವಾಗ ಅವರು ಸಂತೋಷವಾಗಿಯೇ ಇದ್ದರು. ಸಾಮಾನ್ಯವಾಗಿ ಎಲ್ಲಿಗೆ ತೆರಳಿದರೂ ತಮ್ಮ ಇರುವಿಕೆಯ ಬಗ್ಗೆ ಮಾಹಿತಿ ನೀಡುತ್ತಿದ್ದರು ಎಂದು ಅವರ ಅಕ್ಕ ಆಶಾ ತಿಳಿಸಿದ್ದಾರೆ.

ಶಡ್ರಕ್ ಅವರೊಂದಿಗೆ ಒಂದೇ ಕೊಠಡಿಯಲ್ಲಿ ವಾಸಿಸುತ್ತಿದ್ದವರನ್ನು ವಿಚಾರಿಸಿದಾಗ, ಅ. 17ರಿಂದ ಅವರು ಕೊಠಡಿಗೆ ಬಂದಿಲ್ಲ ಎಂದು ತಿಳಿದುಬಂದಿದೆ. ಈ ಬಗ್ಗೆ ಕಂಪನಿಯವರು ಕೂಡ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಆಶಾ ಹೇಳಿದ್ದಾರೆ.

ಶಡ್ರಕ್ ಅವರನ್ನು ಕ್ರಿಸ್‌ಮಸ್ ಸಂದರ್ಭದಲ್ಲಿ ಊರಿಗೆ ಬರುವಂತೆ ಆಹ್ವಾನಿಸಿದ್ದೆವು. ಮುಂದಿನ ಮೇ ತಿಂಗಳಲ್ಲಿ ಊರಿಗೆ ಮರಳುವುದಾಗಿ ಅವರು ತಿಳಿಸಿದ್ದರು. ಇದೀಗ ಅವರ ಸಂಪರ್ಕ ಕಡಿತಗೊಂಡಿರುವುದರಿಂದ ಕುಟುಂಬದವರು ತೀವ್ರ ಆತಂಕದಲ್ಲಿದ್ದಾರೆ.

“ಅವರು ಸುರಕ್ಷಿತವಾಗಿರಲಿ ಎಂದು ಪ್ರಾರ್ಥಿಸುತ್ತಿದ್ದೇವೆ. ಯಾವುದೇ ಮಾಹಿತಿ ದೊರೆತರೂ ತಿಳಿಸುವುದಾಗಿ ರಾಯಭಾರ ಕಚೇರಿಯವರು ಹೇಳಿದ್ದಾರೆ. ಅವರಿಂದ ಮಾಹಿತಿ ಸಿಗುವ ನಿರೀಕ್ಷೆಯಲ್ಲಿದ್ದೇವೆ” ಎಂದು ಆಶಾ ತಿಳಿಸಿದ್ದಾರೆ.

ಶಡ್ರಕ್ ನಾಪತ್ತೆಯಾಗಿರುವ ಕುರಿತು ಅವರ ಪತ್ನಿ ಡೈಸಿ ಇಮ್ಯಾನುವೆಲ್ ಅವರು ಅ. 21ರಂದು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.

ಈ ವಿಷಯವನ್ನು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ, ಸಂಸದ ಕ್ಯಾ. ಬ್ರಿಜೇಶ್ ಚೌಟ ಹಾಗೂ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೂ ತರಲಾಗಿದ್ದು, ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಆಶಾ ತಿಳಿಸಿದ್ದಾರೆ.

ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರಿಗೆ ಪತ್ರ ಬರೆದು ಶಡ್ರಕ್ ಅವರ ಪತ್ತೆಗಾಗಿ ತುರ್ತಾಗಿ ಮಧ್ಯಸ್ಥಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.

ಶಡ್ರಕ್ ಸಂಪರ್ಕಕ್ಕೆ ಸಿಗದಿರುವುದರಿಂದ ಅವರ ಕುಟುಂಬ ತೀವ್ರ ಆತಂಕದಲ್ಲಿದೆ. ಇಸ್ರೇಲ್ ಅಧಿಕಾರಿಗಳು, ಸ್ಥಳೀಯ ಪೊಲೀಸರು ಹಾಗೂ ಸಂಬಂಧಪಟ್ಟ ಕಂಪನಿಯವರು ತಕ್ಷಣ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡಬೇಕು ಎಂದು ಸಂಸದರು ಪತ್ರದಲ್ಲಿ ಒತ್ತಾಯಿಸಿದ್ದಾರೆ. ಕುಟುಂಬದವರು ಶಡ್ರಕ್ ಅವರ ಸುರಕ್ಷಿತ ಮರಳುವಿಕೆಯ ನಿರೀಕ್ಷೆಯಲ್ಲಿದ್ದು, ಅವರ ಪತ್ತೆಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ದೊರೆಯುವುದಕ್ಕಾಗಿ ಕಾಯುತ್ತಿದ್ದಾರೆ.

Leave a Reply

Your email address will not be published. Required fields are marked *