Breaking
28 Oct 2026, Wed

ಮಾಣಿಯಲ್ಲಿ ಮಾಜಿ ಸೈನಿಕರ ಸಂಘದ ಕುಟುಂಬ ಸಹಮಿಲನ ಕಾರ್ಯಕ್ರಮ

ಬಂಟ್ವಾಳ: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ (ರಿ.) ಬಂಟ್ವಾಳ ಘಟಕದ ವತಿಯಿಂದ ಕುಟುಂಬ ಸಹಮಿಲನ ಕಾರ್ಯಕ್ರಮವು ಅ. 25ರಂದು ಮಾಣಿಯ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ನಡೆಯಿತು.

ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಪ್ರಹ್ಲಾದ್ ಶೆಟ್ಟಿ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇಶದ ಪ್ರತಿಯೊಬ್ಬ ಪ್ರಜೆಯೂ ನೆಮ್ಮದಿಯ ಬದುಕು ಸಾಗಿಸಲು ಸೈನಿಕರ ನಿಸ್ವಾರ್ಥ ದೇಶಸೇವೆಯೇ ಪ್ರಮುಖ ಕಾರಣವಾಗಿದೆ ಎಂದರು.

ದೇಶದ ಗಡಿಗಳನ್ನು ಕಾಯುವ ಸೈನಿಕರು ತಮ್ಮ ಯೌವನದ ಅಮೂಲ್ಯ ವರ್ಷಗಳನ್ನು ದೇಶದ ರಕ್ಷಣೆಗಾಗಿ ಮೀಸಲಿಡುತ್ತಾರೆ. ಕುಟುಂಬದಿಂದ ದೂರವಿದ್ದು ಹಗಲು-ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುವ ಅವರ ತ್ಯಾಗ ಮತ್ತು ಬದ್ಧತೆ ಅಪಾರವಾದುದು. ದೇಶದ ಜನರು ಸುರಕ್ಷಿತವಾಗಿ ಬದುಕಲು ಸೈನಿಕರ ಸೇವೆ ಮಹತ್ವದ ಕೊಡುಗೆ ನೀಡುತ್ತದೆ ಎಂದು ಹೇಳಿದರು.

ಸೈನಿಕರ ಸೇವೆ ಕೇವಲ ಗಡಿಗಳ ರಕ್ಷಣೆಗೆ ಸೀಮಿತವಾಗಿಲ್ಲ. ದೇಶದ ಏಕತೆ, ಸಮಗ್ರತೆ ಮತ್ತು ಶಾಂತಿಯನ್ನು ಕಾಪಾಡುವಲ್ಲಿಯೂ ಅವರ ಪಾತ್ರ ಮಹತ್ವದ್ದಾಗಿದೆ. ನಿವೃತ್ತಿಯ ಬಳಿಕವೂ ಮಾಜಿ ಸೈನಿಕರು ಸಮಾಜಕ್ಕೆ ಮಾದರಿಯಾಗಿ ಬದುಕುತ್ತಿದ್ದು, ಯುವಜನರಲ್ಲಿ ದೇಶಪ್ರೇಮ, ಶಿಸ್ತು ಮತ್ತು ಸೇವಾ ಮನೋಭಾವ ಬೆಳೆಸುವಲ್ಲಿ ಮಾರ್ಗದರ್ಶಕರಾಗಿದ್ದಾರೆ. ಮಾಜಿ ಸೈನಿಕರು ಹಾಗೂ ಅವರ ಕುಟುಂಬದವರು ಪರಸ್ಪರ ಸೌಹಾರ್ದದಿಂದ ಬೆರೆಯಲು ಇಂತಹ ಕುಟುಂಬ ಸಹಮಿಲನ ಕಾರ್ಯಕ್ರಮಗಳು ಉತ್ತಮ ವೇದಿಕೆಯಾಗಿವೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಬಂಟ್ವಾಳ ಘಟಕದ ಅಧ್ಯಕ್ಷ ಮೋನಪ್ಪ ಪೂಜಾರಿ ವಹಿಸಿದ್ದರು. ಸಂಘದ ಗೌರವಾಧ್ಯಕ್ಷ ವೆಂಕಪ್ಪ ಪುಣಚ, ಕಾರ್ಯದರ್ಶಿ ಐವನ್ ಮೆನೇಜಸ್ ಲೊರೆಟ್ಟೊ, ಸಂಘದ ರಾಜ್ಯ ಸಂಚಾಲಕ ಮ್ಯಾಥ್ಯೂ ಟಿ.ಜಿ., ಕಡಬ ಘಟಕದ ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ., ಬೆಳ್ತಂಗಡಿ ಘಟಕದ ಅಧ್ಯಕ್ಷ ಎನ್.ಪಿ. ತಂಗಚ್ಚನ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವೀರನಾರಿ ಘಟಕದ ಅಧ್ಯಕ್ಷೆ ಗೀತಾ ಉಪಸ್ಥಿತರಿದ್ದರು.

ಚೇತನ ಧನಂಜಯ್ ನೈತೊಟ್ಟು ಪ್ರಾರ್ಥಿಸಿದರು. ಐವನ್ ಮೆನೇಜಸ್ ಲೊರೆಟ್ಟೊ ಸ್ವಾಗತಿಸಿ, ಸಂಘದ ವರದಿ ವಾಚಿಸಿದರು. ಧನಂಜಯ್ ನೈತೊಟ್ಟು ವಂದಿಸಿದರು. ಜಾನಕಿ ರಾಜೇಶ್ ಗೌಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಕಲ್ಲಡ್ಕದ ಶ್ರೀರಾಮ ಕನ್ನಡ ಮಾಧ್ಯಮ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *