ತರೀಕೆರೆ: ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಆರೋಗ್ಯ ತಪಾಸಣೆ, ಮಾಹಿತಿ ಮತ್ತು ಜಾಗೃತಿಗಾಗಿ 32ನೇ ವಸತಿಯುತ ಉಚಿತ ಶಿಬಿರವು ಅ. 28ರಂದು ತರೀಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಉದ್ಘಾಟನೆಗೊಂಡಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು; ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ, ತರೀಕೆರೆ; ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ತರೀಕೆರೆ; ಎಪಿಡಿ, ಬೆಂಗಳೂರು ಹಾಗೂ ಸೇವಾಭಾರತಿ–ಸೇವಾಧಾಮ, ಚಿಕ್ಕಮಗಳೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ಶಿಬಿರ ಆಯೋಜಿಸಲಾಗಿತ್ತು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್ ಬಿ.ಜಿ. ಅವರು ಶಿಬಿರ ಉದ್ಘಾಟಿಸಿ, ಸೇವಾಧಾಮದ ಕಾರ್ಯಚಟುವಟಿಕೆಗಳನ್ನು ಶ್ಲಾಘಿಸಿದರು. ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರು ಸಮಾಜದಲ್ಲಿ ಹಿಂದುಳಿಯದೆ ಎಲ್ಲ ಕ್ಷೇತ್ರಗಳಲ್ಲಿಯೂ ಮುನ್ನಡೆಯಬೇಕು. ಈ ಉದ್ದೇಶದಿಂದ ಆಯೋಜಿಸುವ ಇಂತಹ ಶಿಬಿರಗಳಿಗೆ ಆರೋಗ್ಯ ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. ಸೇವಾಭಾರತಿ ಸಂಸ್ಥೆಯು ಇನ್ನಷ್ಟು ಸೇವಾ ಕಾರ್ಯಗಳನ್ನು ಕೈಗೊಂಡು ಯಶಸ್ಸು ಸಾಧಿಸಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ತರೀಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಚನ್ನಬಸಪ್ಪ ಎಂ.ಜೆ., ತರೀಕೆರೆ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ರವಿ ಕುಮಾರ್ ಬಿ.ಪಿ., ವಿಕಸನ ಸಂಸ್ಥೆಯ ನಿರ್ದೇಶಕ ಎ.ಎಂ. ವರ್ಗೀಸ್ ಕ್ಲೀಟಸ್, ರೋಟರಿ ಕ್ಲಬ್ ಕಾರ್ಯದರ್ಶಿ ಪ್ರವೀಣ್ ಪಿ., ಮಕ್ಕಳ ತಜ್ಞ ಡಾ. ದೇವಾನಂದ್, ತಾಲ್ಲೂಕು ಎಂಆರ್‌ಡಬ್ಲ್ಯು ಅಕ್ರಮ್ ಪಾಷಾ ಹಾಗೂ ಬೆಂಗಳೂರು ಎಪಿಡಿ ಯೋಜನಾ ಸಂಯೋಜಕ ಕುಸುಮಾಧರ ಉಪಸ್ಥಿತರಿದ್ದರು.

ಚಿಕ್ಕಮಗಳೂರಿನ ಕ್ಷೇತ್ರ ಸಂಯೋಜಕ ನಾಗಾರ್ಜುನ ಡಿ.ಎ. ಸ್ವಾಗತಿಸಿದರು. ತರೀಕೆರೆಯ ವಿಆರ್‌ಡಬ್ಲ್ಯು ಶೈಲಾ ಬಿ. ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಕನ್ನಡದ ಕ್ಷೇತ್ರ ಸಂಯೋಜಕ ಧನೇಂದ್ರ ವಂದಿಸಿದರು. ಶಿಬಿರದಲ್ಲಿ ಒಟ್ಟು 10 ಮಂದಿ ದಿವ್ಯಾಂಗರು ಪಾಲ್ಗೊಂಡಿದ್ದರು.



