Breaking
8 Oct 2026, Thu

ಕೋಟೆಬಾಗಿಲಿನಲ್ಲಿ ಸ್ಕೂಟಿ ಸ್ಕಿಡ್; ಇಬ್ಬರು ವಿದ್ಯಾರ್ಥಿಗಳ ದಾರುಣ ಸಾವು

ಮೂಡುಬಿದಿರೆ: ಕೋಟೆಬಾಗಿಲು ವೀರ ಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಸ್ಕೂಟಿ ಸ್ಕಿಡ್ ಆಗಿ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬುಧವಾರ ಸಂಜೆ ನಡೆದಿದೆ.


ಮೃತರನ್ನು ಕೋಟೆಬಾಗಿಲು ನಿವಾಸಿ ಸುಧಾಕರ ಹೆಗ್ಡೆ ಅವರ ಪುತ್ರ, ಜೈನ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಪ್ರಶ್ವಿತ್ ಹೆಗ್ಡೆ (17) ಹಾಗೂ ಕೋಟೆಬಾಗಿಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಚಂದ್ರ ಅವರ ಪುತ್ರ ದೀಕ್ಷಿತ್ ಪೂಜಾರಿ ಎಂದು ಗುರುತಿಸಲಾಗಿದೆ.
ಬುಧವಾರ ಸಂಜೆ ಶಿರ್ತಾಡಿ ಕಡೆಯಿಂದ ಕೋಟೆಬಾಗಿಲು ಕಡೆಗೆ ಇಬ್ಬರೂ ಸ್ಕೂಟರ್ನಲ್ಲಿ ತೆರಳುತ್ತಿದ್ದ ವೇಳೆ ವೀರ ಮಾರುತಿ ದೇವಸ್ಥಾನದ ಬಳಿಯ ತಿರುವಿನಲ್ಲಿ ಸ್ಕೂಟಿ ನಿಯಂತ್ರಣ ತಪ್ಪಿ ಸ್ಕಿಡ್ ಆಗಿದೆ. ಪರಿಣಾಮ ಇಬ್ಬರೂ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.


ಅಪಘಾತದಲ್ಲಿ ಪ್ರಶ್ವಿತ್ ಹೆಗ್ಡೆ ಅವರ ತಲೆಗೆ ತೀವ್ರ ಗಾಯವಾಗಿದ್ದು, ದೀಕ್ಷಿತ್ ಪೂಜಾರಿ ಅವರಿಗೂ ತಲೆಗೆ ಗಾಯಗಳಾಗಿತ್ತು. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಶ್ವಿತ್ ಅವರು ಬುಧವಾರ ಸಂಜೆ ಮೃತಪಟ್ಟರೆ, ದೀಕ್ಷಿತ್ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿ ಮೂಡುಬಿದಿರೆ ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *