ಸಿದ್ದಕಟ್ಟೆ: ದಕ್ಷಿಣ ಕನ್ನಡ ಜಿಲ್ಲೆಯ 28 ಗ್ರಾಮಾಂತರ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತುರ್ತು ಆಂಬ್ಯುಲೆನ್ಸ್‌ಗಳಿಗೆ ಚಾಲಕರು ಹಾಗೂ ದಾದಿಯರ ಕೊರತೆಯಿಂದಾಗಿ 24×7 ತುರ್ತು ವೈದ್ಯಕೀಯ ಸೇವೆ ಸಮರ್ಪಕವಾಗಿ ದೊರೆಯುತ್ತಿಲ್ಲ.

ಕಳೆದ ಮೂರು ವರ್ಷಗಳಿಂದ ಈ ಸಮಸ್ಯೆ ಮುಂದುವರಿದಿದ್ದು, ಆರೋಗ್ಯ ಇಲಾಖೆ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸಿದ್ದಕಟ್ಟೆ, ಫರಂಗಿಪೇಟೆ, ವಾಮಂಜೂರು, ಮುಡಿಪು, ವಿಟ್ಲ ಹಾಗೂ ಉಪ್ಪಿನಂಗಡಿ ಸೇರಿದಂತೆ ವಿವಿಧ ಗ್ರಾಮಾಂತರ ಪ್ರದೇಶಗಳಲ್ಲಿ ತುರ್ತು ವೈದ್ಯಕೀಯ ಸೇವೆ ನೀಡುತ್ತಿದ್ದ ಕೆಲವು ಆಂಬ್ಯುಲೆನ್ಸ್‌ಗಳು ಸಿಬ್ಬಂದಿ ಕೊರತೆಯಿಂದಾಗಿ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದಾಗಿ ಅವರು ತಿಳಿಸಿದ್ದಾರೆ.

ಇದರಿಂದ ಅಪಘಾತ ಸೇರಿದಂತೆ ವಿವಿಧ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳು ಹಾಗೂ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಸರ್ಕಾರಿ ತುರ್ತು ಆಂಬ್ಯುಲೆನ್ಸ್ ಸೇವೆ ಲಭ್ಯವಾಗದೆ ಖಾಸಗಿ ಆಂಬ್ಯುಲೆನ್ಸ್‌ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಖಾಸಗಿ ಆಂಬ್ಯುಲೆನ್ಸ್‌ಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗದ ಕಾರಣ ಕೆಲ ಪ್ರಕರಣಗಳಲ್ಲಿ ರೋಗಿಗಳ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವ ನಿದರ್ಶನಗಳೂ ಇವೆ ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ಜಿಲ್ಲೆಯ 28 ಗ್ರಾಮಾಂತರ ಪ್ರದೇಶಗಳ ಆಂಬ್ಯುಲೆನ್ಸ್ ಸೇವೆಯಲ್ಲಿ 60 ದಾದಿಯರ ಹುದ್ದೆಗಳು ಹಾಗೂ 46 ಚಾಲಕರ ಹುದ್ದೆಗಳು ಖಾಲಿ ಇದ್ದು, ಶೇ. 75% ರಷ್ಟು ಪ್ರಮಾಣದ ಸಿಬ್ಬಂದಿ ಕೊರತೆ ಉಂಟಾಗಿದೆ ಎಂದು ಪ್ರಭಾಕರ ಪ್ರಭು ತಿಳಿಸಿದ್ದಾರೆ.
ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ತುರ್ತು ಆಂಬ್ಯುಲೆನ್ಸ್ ಸೇವೆ ನಿರಂತರವಾಗಿ ಲಭ್ಯವಾಗುವಂತೆ ಖಾಲಿ ಇರುವ ಚಾಲಕರು ಹಾಗೂ ದಾದಿಯರ ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಿ ಅಗತ್ಯ ಸೇವೆಯನ್ನು ಸಮರ್ಪಕವಾಗಿ ಒದಗಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿರುವುದಾಗಿ ಪ್ರಭಾಕರ ಪ್ರಭು ತಿಳಿಸಿದ್ದಾರೆ.



