ಬಂಟ್ವಾಳ: ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಮಂಗಳೂರಿನಲ್ಲಿ ಅಧಿವೇಶನ ನಡೆಸುವ ನಿರ್ಧಾರ ರಾಜಕೀಯ ನಾಟಕವಷ್ಟೇ. ಇದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಎಂದಿಗೂ ಮರುಳಾಗುವುದಿಲ್ಲ ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು.

ಬ್ರಹ್ಮರಕೂಟ್ಲು ಬಂಟರ ಭವನದಲ್ಲಿ ಬುಧವಾರ ನಡೆದ ‘ವಿಕಸಿತ ಭಾರತ ಸಂಕಲ್ಪ ಸಭೆ’ ಹಾಗೂ ಸೇವಾ ಜ್ಯೋತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾನ್ಯ ಕಾರ್ಯಕರ್ತನಾಗಿ ರಾಜಕೀಯ ಪ್ರವೇಶಿಸಿ, ಪ್ರಾಮಾಣಿಕತೆ ಹಾಗೂ ಪಾರದರ್ಶಕ ಆಡಳಿತದ ಮೂಲಕ ದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ. ಅವರ ಕಾರ್ಯವೈಖರಿ ಎಲ್ಲರಿಗೂ ಪ್ರೇರಣೆಯಾಗಿದೆ ಎಂದರು.

ಎಸ್ಐಆರ್ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಡೆಸುತ್ತಿರುವ ದರ್ಪ, ದಬ್ಬಾಳಿಕೆಗೆ ಬಿಜೆಪಿ ಕಾರ್ಯಕರ್ತರು ಹೆದರುವುದಿಲ್ಲ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಚೌಟ ವಿಶ್ವಾಸ ವ್ಯಕ್ತಪಡಿಸಿದರು.
‘ಕಾಂಗ್ರೆಸ್ಗೆ ಇನ್ನೂ ನಕಲಿ ಹಾಗೂ ಬಾಂಗ್ಲಾದೇಶ ಮೂಲದ ಮತದಾರರ ಅಗತ್ಯವಿದೆಯೇ?’ ಎಂದು ಪ್ರಶ್ನಿಸಿದ ಅವರು, ಮತದಾರರ ಪಟ್ಟಿಯಲ್ಲಿನ ಅಕ್ರಮಗಳ ವಿರುದ್ಧ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ನಕಲಿ ಮತದಾರರ ಕುರಿತು ಬಿಜೆಪಿ ಕಾರ್ಯಕರ್ತರು ದೂರು ನೀಡುವ ಕಾರ್ಯ ಮುಂದುವರಿಸಲಿದ್ದಾರೆ ಎಂದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ, ದೇಶದಾದ್ಯಂತ ಏಕಕಾಲದಲ್ಲಿ 803 ಕಡೆಗಳಲ್ಲಿ ಸೇವಾ ಜ್ಯೋತಿ ಕಾರ್ಯಕ್ರಮ ನಡೆದಿದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಂಗಳೂರಿನಲ್ಲಿ ಅಧಿವೇಶನ ಕರೆದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಅದಕ್ಕೆ ಮರುಳಾಗುವುದಿಲ್ಲ ಎಂದರು.

ಶಾಸಕರಾದ ರಾಜೇಶ್ ನಾಯ್ಕ್ ಉಳಿಪಾಡಿ, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಕಿಶೋರ್ ಕುಮಾರ್ ಬೊಟ್ಯಾಡಿ, ಮಾಜಿ ಶಾಸಕರಾದ ಪ್ರತಾಪಸಿಂಹ ನಾಯಕ್, ಎ. ರುಕ್ಮಯ ಪೂಜಾರಿ, ಕೆ. ಪದ್ಮನಾಭ ಕೊಟ್ಟಾರಿ, ಸಂಜೀವ ಮಠಂದೂರು, ಅರುಣ್ ಶಹಾಪುರ್, ಪ್ರಭಾರಿಗಳಾದ ಜಯಂತ್ ಕೋಟ್ಯಾನ್, ಭರತೀಶ್, ಆರ್.ಸಿ. ನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಸೇವಾ ಸಂಕಲ್ಪ ಪ್ರತಿಜ್ಞಾ ವಿಧಿ ಬೋಧಿಸಿದರು. ಯತೀಶ್ ಸ್ವಾಗತಿಸಿದರು. ಸುದರ್ಶನ್ ಬಜ ವಂದಿಸಿದರು. ರಾಕೇಶ್ ರೈ ಕಡೆಂಜ ಕಾರ್ಯಕ್ರಮ ನಿರೂಪಿಸಿದರು.


