Breaking
7 Oct 2026, Wed

ಬಂಟ್ವಾಳದಲ್ಲಿ ಹಿಂದಿ ದಿವಸ್ ಆಚರಣೆ: ಸಾಧಕ ಶಿಕ್ಷಕರಿಗೆ ಗೌರವ

ಬಂಟ್ವಾಳ: ತಾಲೂಕು ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ವತಿಯಿಂದ ‘ಹಿಂದಿ ದಿವಸ್-2025-26’ ಕಾರ್ಯಕ್ರಮವನ್ನು ಬಿ.ಆರ್.ಸಿ. ಬಂಟ್ವಾಳದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ, ಹಿಂದಿ ಜಗತ್ತಿನ ಪ್ರಮುಖ ಭಾಷೆಗಳಲ್ಲಿ ಒಂದಾಗಿದ್ದು, ವಿದ್ಯಾರ್ಥಿಗಳಿಗೆ ಸುಲಭವಾಗಿ ಅಂಕ ಗಳಿಸಲು ಸಹಕಾರಿಯಾಗುವ ಭಾಷೆಯಾಗಿದೆ. ಇಂಪಾದ ಪ್ರಾರ್ಥನೆಯೊಂದಿಗೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿ ಶಿಕ್ಷಕರು ಒಗ್ಗಟ್ಟು ಪ್ರದರ್ಶಿಸಿರುವುದು ಹೆಮ್ಮೆಯ ಸಂಗತಿ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಟ್ವಾಳ ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜೋಯೆಲ್ ಲೋಬೊ ಮಾತನಾಡಿ, ರಾಜ್ಯದಲ್ಲಿ ತ್ರಿಭಾಷಾ ನೀತಿಯ ಬದಲಾಗಿ ಎ.ಐ. ಹೇರಿಕೆಯಿಂದ ಹಿಂದಿ ಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಸಹ ಶಿಕ್ಷಕರ ಸಂಘ ಖಂಡಿಸುತ್ತದೆ. ಈ ವಿಚಾರದಲ್ಲಿ ಹಿಂದಿ ಶಿಕ್ಷಕರೊಂದಿಗೆ ಸಂಘ ಸದಾ ಇರಲಿದೆ ಎಂದು ಆತ್ಮಸ್ಥೈರ್ಯ ತುಂಬಿದರು.

ಶಿಕ್ಷಣ ಸಮನ್ವಯಾಧಿಕಾರಿ ವಿದ್ಯಾಕುಮಾರಿ ಮಾತನಾಡಿ, ಶಿಕ್ಷಕರ ಯಾವುದೇ ಶೈಕ್ಷಣಿಕ ಕೆಲಸ ಕಾರ್ಯಗಳಿಗೆ ಶಿಕ್ಷಣ ಇಲಾಖೆಯ ಕಚೇರಿಯಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ದೀಪಿಕಾ ಪ್ರೌಢಶಾಲೆ, ಮೊಡಂಕಾಪುವಿನ ಹಿಂದಿ ಶಿಕ್ಷಕ ತಿಪ್ಪೇಸ್ವಾಮಿ ಅವರಿಗೆ ‘ಹಿಂದಿರತ್ನ’ ಪುರಸ್ಕಾರ ನೀಡಿ ಗೌರವಿಸಲಾಯಿತು. ಸೇವೆಯಿಂದ ನಿವೃತ್ತರಾದ ಬಿ.ಎ. ಆಂಗ್ಲ ಮಾಧ್ಯಮ ಪ್ರೌಢಶಾಲೆ, ತುಂಬೆಯ ಹಿಂದಿ ಶಿಕ್ಷಕ ರಘುಪತಿ ಭಟ್ ಅವರನ್ನು ಸನ್ಮಾನಿಸಲಾಯಿತು.

ಕಳೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಿಂದಿಯಲ್ಲಿ ಗರಿಷ್ಠ ಅಂಕ ಗಳಿಸಿದ ನವೋದಯ ಮುಡಿಪುವಿನ ಸುಮಿತ್ ಟಿ. ನಾಯಕ್ ಅವರಿಗೆ ನಗದು ಪುರಸ್ಕಾರ ನೀಡಲಾಯಿತು.

ಶೇ.100 ಫಲಿತಾಂಶ ದಾಖಲಿಸಿದ ಶಿಕ್ಷಕರಾದ ಜಾನಕಿ (ಎಸ್‌ವಿಎಸ್ ದೇವಳ), ಸುಝಿಯ (ಅಕ್ಷರಭಾರತಿ) ಹಾಗೂ ಪ್ರತಿಮಾ (ಸೈಂಟ್ ಜಾನ್ಸ್ ಅಲ್ಲಿಪಾದೆ) ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಹಿಂದಿ ವಿಷಯದಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಸುಮಾರು 74 ಶಾಲೆಗಳ ಶಿಕ್ಷಕರಿಗೆ ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.

ಸಂಘದ ಗೌರವಾಧ್ಯಕ್ಷ ಹಾಗೂ ಇಸಿಒ ರಮಾನಂದ ನೂಜಿಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷ ಶಂಕರ ವೆಂಕಪ್ಪ ಪಾವಸ್ಕರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಜಯರಾಮ್ ಕಾಂಚನ ಪ್ರಾರ್ಥನೆ ನೆರವೇರಿಸಿ ವರದಿ ವಾಚಿಸಿದರು.

ಶಿಕ್ಷಕ ತಿಪ್ಪೇಸ್ವಾಮಿ ಸ್ವಾಗತಿಸಿದರು. ಪಂಚಾಕ್ಷರಿ ವಂದಿಸಿದರು. ಶ್ರೀದೇವಿ ಕಾರ್ಯಕ್ರಮ ನಿರೂಪಿಸಿದರು. ರಮ್ಯಾ ನಿರ್ಮಲ ಮೊಂತೇರೊ ಸೇರಿದಂತೆ ಇತರರು ಸಹಕರಿಸಿದರು.

Leave a Reply

Your email address will not be published. Required fields are marked *