ಮೂಡುಬಿದಿರೆ: ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ ಹಾಗೂ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನೀಡಿದ ಕೊಡುಗೆಯನ್ನು ಗುರುತಿಸಿ ಮೂಡುಬಿದಿರೆ ತಾಲೂಕಿನ ಪುಚ್ಚಮೊಗರು ನಿವಾಸಿ, ಸಂಗಬೆಟ್ಟು ಮೂಲದ ಮಹಮ್ಮದ್ ಝೂಬಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮಹಮ್ಮದ್ ಝೂಬಿ ಅವರು ಎಂ. ಶೇಖಬ್ಬ ಮತ್ತು ಜಮೀಲಮ್ಮ ದಂಪತಿಯ ಪುತ್ರ. ಸಂಗಬೆಟ್ಟುವಿನಲ್ಲಿ ಹುಟ್ಟಿ ಬೆಳೆದ ಇವರು ಬಾಲ್ಯದಿಂದಲೇ ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದವರು. ಸಂತ ಪ್ಯಾಟ್ರಿಕ್ ಕನ್ನಡ ಶಾಲೆ ಹಾಗೂ ಸಿದ್ದಕಟ್ಟೆ ಸರಕಾರಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿ ಜೀವನದಲ್ಲಿ 100 ಮತ್ತು 200 ಮೀಟರ್ ಓಟದಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದ್ದರು.

ಕುಟುಂಬದ ಜೀವನ ನಿರ್ವಹಣೆಯ ಜವಾಬ್ದಾರಿಯಿಂದಾಗಿ ವಿದ್ಯಾಭ್ಯಾಸವನ್ನು ಅರ್ಧದಲ್ಲೇ ಮೊಟಕುಗೊಳಿಸಿ ವೃತ್ತಿ ಜೀವನಕ್ಕೆ ಕಾಲಿಟ್ಟರು. ಆರಂಭದಲ್ಲಿ ಬಸ್ ನಿರ್ವಾಹಕರಾಗಿ ಕೆಲಸ ಆರಂಭಿಸಿ ಬಳಿಕ ಚಾಲಕರಾದರು. ತಮ್ಮ ಕಠಿಣ ಪರಿಶ್ರಮ ಮತ್ತು ಛಲದಿಂದ ಬಸ್ ಚಾಲಕರಿಂದ ಬಸ್ ಮಾಲಕರಾಗಿ ಬೆಳೆದದ್ದು ಅವರ ಸಾಧನೆಯ ಹಾದಿಗೆ ಸಾಕ್ಷಿಯಾಗಿದೆ.

ಪುಚ್ಚಮೊಗರು ಶಾಲೆಯೊಂದಿಗೆ ಇವರಿಗೆ ಬೆಸೆದುಕೊಂಡ ಸಂಬಂಧವು ಶಿಕ್ಷಣ ಕ್ಷೇತ್ರದ ಮಹತ್ವದ ಸಾಧನೆಗೆ ನಾಂದಿಯಾಯಿತು. ತಮ್ಮ ಇಬ್ಬರು ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಯಿಂದ ಸ್ವಗ್ರಾಮದ ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಸಂಕಲ್ಪ ಮಾಡಿದರು. ತಮ್ಮ ಆತ್ಮೀಯರಿಗೂ ಮಕ್ಕಳನ್ನು ಇದೇ ಶಾಲೆಗೆ ಸೇರಿಸುವಂತೆ ಮನವೊಲಿಸಿದರು.

ನಂತರ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡು ಶಾಲೆಯ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದರು. ಶಿಕ್ಷಕ ವೃಂದದೊಂದಿಗೆ ಉತ್ತಮ ಸಮನ್ವಯ ಸಾಧಿಸಿ ಶಾಲೆಯ ಅಗತ್ಯತೆಗಳಿಗೆ ಧ್ವನಿಯಾದರು. ದಾನಿಗಳು, ಜನಪ್ರತಿನಿಧಿಗಳು, ರಾಜಕೀಯ ಮುಖಂಡರು, ಅಧಿಕಾರಿಗಳು, ಊರಿನ ಹಿರಿಯರು ಹಾಗೂ ವಿದ್ಯಾಭಿಮಾನಿಗಳ ಸಹಕಾರ ಪಡೆದು ಶಾಲೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಿದರು.

ಒಂದು ಕಾಲದಲ್ಲಿ ಮುಚ್ಚುವ ಹಂತದಲ್ಲಿದ್ದ ಶಾಲೆಯಲ್ಲಿ ಇಂದು ನೂರಕ್ಕೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೊಸ ತರಗತಿ ಕೊಠಡಿಗಳು, ಬಸ್ ಸೌಲಭ್ಯ, ಶೌಚಾಲಯ, ಕಂಪ್ಯೂಟರ್ಗಳು, ಆಟದ ಉದ್ಯಾನವನ, ಕುಡಿಯುವ ನೀರಿನ ಘಟಕ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಮಹಮ್ಮದ್ ಝೂಬಿ ಅವರ ಪಾತ್ರ ಮಹತ್ವದ್ದಾಗಿದೆ. ಇವರ ನಿರಂತರ ಪ್ರಯತ್ನದ ಫಲವಾಗಿ ಶಾಲೆಯು ಇಂದು ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಆಗಿ ಪರಿವರ್ತನೆಗೊಂಡಿದೆ.

ಸರ್ಕಾರಿ ಶಾಲೆಗಳೂ ಖಾಸಗಿ ಶಾಲೆಗಳಿಗೆ ಸಮಾನವಾಗಿ ಗುಣಮಟ್ಟದ ಶಿಕ್ಷಣ ನೀಡಬಲ್ಲವು ಎಂಬುದನ್ನು ತಮ್ಮ ಕಾರ್ಯದ ಮೂಲಕ ತೋರಿಸಿಕೊಟ್ಟಿದ್ದಾರೆ. ಇವರ ಸೇವೆ ಮತ್ತು ಸಾಧನೆಯನ್ನು ವಿವಿಧ ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸಿವೆ.

ಇದಲ್ಲದೆ, ನವೆಂಬರ್ 11ರಂದು ಬೆಂಗಳೂರಿನ ಯಡಿಯೂರಿನಲ್ಲಿರುವ ಡಾ. ಪುನೀತ್ ರಾಜ್ಕುಮಾರ್ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ‘ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.

ಸಂಗಬೆಟ್ಟುವಿನಲ್ಲಿ ಹುಟ್ಟಿ ಬೆಳೆದು ಪುಚ್ಚಮೊಗರು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಮಾದರಿಯಾದ ಕೊಡುಗೆ ನೀಡಿರುವ ಮಹಮ್ಮದ್ ಝೂಬಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಶಾಲೆ, ಊರು ಹಾಗೂ ಸಮಸ್ತ ಗ್ರಾಮಸ್ಥರಿಗೆ ಹೆಮ್ಮೆಯ ಸಂಗತಿಯಾಗಿದೆ.

ಇವರು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಸಾಧನೆಗಳನ್ನು ಮಾಡುವಂತಾಗಲಿ, ಇವರ ಸೇವೆಯಿಂದ ಶಾಲೆಯು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂಬುದು ಊರಿನವರ ಹಾಗೂ ಹಿತೈಷಿಗಳ ಆಶಯವಾಗಿದೆ.



