ನವದೆಹಲಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಉಮರ್ ಫಾರೂಕ್ ಎಂ.ಆರ್.ನನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆ. 5 ರ ಬುಧವಾರ ಕೇರಳದ ಕೊಚ್ಚಿಯಲ್ಲಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಬಂಧಿಸಿದೆ.

2022ರ ಜುಲೈ 26ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ನಡೆದ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಇದುವರೆಗೆ ಬಂಧಿತರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.
ಎನ್‌ಐಎ ಮಾಹಿತಿ ಪ್ರಕಾರ, ಉಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ಬಂಧನಕ್ಕೆ ನೆರವಾಗುವ ಮಾಹಿತಿ ನೀಡಿದವರಿಗೆ ₹4 ಲಕ್ಷ ಬಹುಮಾನವನ್ನೂ ಘೋಷಿಸಲಾಗಿತ್ತು.

ಪ್ರವೀಣ್ ನೆಟ್ಟಾರು ಹತ್ಯೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆ (IPC) ಹಾಗೂ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (UAPA) ಅಡಿಯಲ್ಲಿ ಎನ್‌ಐಎ ಆರೋಪಪಟ್ಟಿ ಸಲ್ಲಿಸಿತ್ತು.

ತನಿಖೆಯಲ್ಲಿ, ನಿಷೇಧಿತ ಪಿಎಫ್‌ಐ ಸಂಘಟನೆಯ ಸಂಚು ಸಭೆಯಲ್ಲಿ ಉಮರ್ ಫಾರೂಕ್ ಭಾಗವಹಿಸಿದ್ದಲ್ಲದೆ, ಹತ್ಯೆಗೆ ಮುನ್ನ ಬೆಳ್ಳಾರೆ ಗ್ರಾಮದಲ್ಲಿ ಪ್ರವೀಣ್ ಮೇಲೆ ದಾಳಿ ನಡೆಸಲು ಸ್ಥಳ ಗುರುತಿಸುವುದು ಹಾಗೂ ಸ್ಥಳ ಪರಿಶೀಲನೆ ನಡೆಸಲು ಸಹಆರೋಪಿಯೊಬ್ಬನಿಗೆ ತನ್ನ ಬೈಕ್ ನೀಡಲು ಆತ ಒಪ್ಪಿಕೊಂಡಿದ್ದ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೆ, ಪ್ರಕರಣದ ರಕ್ಷಿತ ಸಾಕ್ಷಿದಾರನನ್ನು ಹತ್ಯೆ ಮಾಡಲು ನಡೆದ ಯತ್ನದಲ್ಲಿಯೂ ಇತರ ಆರೋಪಿಗಳೊಂದಿಗೆ ಭಾಗಿಯಾಗಿದ್ದಾನೆ ಎಂಬ ಆರೋಪಗಳು ಕೇಳಿಬಂದಿವೆ.

ಈ ವರ್ಷದ ಜುಲೈನಲ್ಲಿ ಎನ್‌ಐಎ ಮತ್ತಿಬ್ಬರು ತಲೆಮರೆಸಿಕೊಂಡಿದ್ದ ಆರೋಪಿಗಳಾದ ಅಬ್ದುಲ್ ನಾಸಿರ್ ಪಿ. ಅಲಿಯಾಸ್ ನಾಸಿರ್ ಹಾಗೂ ನೌಶಾದ್ ಅವರನ್ನು ಕ್ರಮವಾಗಿ ಕೇರಳದ ಕೊಚ್ಚಿ ಮತ್ತು ತಮಿಳುನಾಡಿನ ಹೊಸೂರುಗಳಲ್ಲಿ ಬಂಧಿಸಿತ್ತು. ಆಂಧ್ರ ಪ್ರದೇಶ ಪೊಲೀಸರಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಈ ಸಂಯೋಜಿತ ಕಾರ್ಯಾಚರಣೆ ನಡೆಸಲಾಗಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ರಾಜ್ಯಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಬಳಿಕ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು. ತನಿಖೆಯಲ್ಲಿ ಈ ಹತ್ಯೆ ನಿಷೇಧಿತ ಪಿಎಫ್‌ಐ ಸಂಘಟನೆಯ ಕಾರ್ಯಕರ್ತರು ರೂಪಿಸಿದ್ದ ಸಂಚಿನ ಭಾಗವಾಗಿತ್ತು ಎಂಬುದು ಬಹಿರಂಗವಾಗಿದೆ.
ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಿ ಬಂಧಿಸುವ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ ಎಂದು ಎನ್‌ಐಎ ತಿಳಿಸಿದೆ.


