Breaking
21 Sep 2026, Mon

ಒಡಿಯೂರಿನಲ್ಲಿ ‘ಗ್ರಾಮ ವಿಕಾಸ ರಜತ ಸಂಭ್ರಮ’ಕ್ಕೆ ಚಾಲನೆ

ಬಂಟ್ವಾಳ: ತುಳುನಾಡಿನ ಗ್ರಾಮೀಣ ಪ್ರದೇಶಗಳಲ್ಲಿ ತುಳು ಭಾಷೆ, ಸಂಸ್ಕೃತಿ ಹಾಗೂ ಪರಂಪರೆಯ ಉಳಿವು-ಬೆಳವಣಿಗೆಗಾಗಿ ಹಲವು ವರ್ಷಗಳಿಂದ ನಡೆಯುತ್ತಿರುವ ಪ್ರಯತ್ನಗಳ ನಡುವೆ, ಮಂಗಳೂರಿನಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ತುಳು ಭಾಷೆಗೆ ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಣೆ ಮಾಡಿರುವುದು ಸಂತಸದ ಹಾಗೂ ಅವಿಸ್ಮರಣೀಯ ಕ್ಷಣವಾಗಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.


ಒಡಿಯೂರು ಶ್ರೀ ಗುರುದೇವಾನಂದ ಸಂಸ್ಥಾನಮ್ ನೇತೃತ್ವದಲ್ಲಿ, ಒಡಿಯೂರು ಶ್ರೀ ಚಾರಿಟೇಬಲ್ ಟ್ರಸ್ಟ್, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ರಜತ ಸಂಭ್ರಮ ಸಮಿತಿ ಹಾಗೂ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಸಹಭಾಗಿತ್ವದಲ್ಲಿ ಆಯೋಜಿಸಲಾದ ‘ಗ್ರಾಮ ವಿಕಾಸ ರಜತ ಸಂಭ್ರಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.


‘ವಿಕಸಿತ ಭಾರತಕ್ಕೆ ಗ್ರಾಮ ವಿಕಾಸ ಮುನ್ನುಡಿಯಾಗಿದೆ’ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ ಮಾತನಾಡಿ, “ಒಡಿಯೂರು ಕ್ಷೇತ್ರದ ಮೂಲಕ 60 ಸಾವಿರಕ್ಕೂ ಮಿಕ್ಕಿ ಬಡ ಕುಟುಂಬಗಳು ಸಂತೃಪ್ತ ಜೀವನ ನಡೆಸುತ್ತಿವೆ” ಎಂದರು.


ಇದೇ ವೇಳೆ ಪತ್ರಕರ್ತ ಯಶು ವಿಟ್ಲ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ರಜತ ವಿಕಾಸ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು. ಮುಂಬೈನ ಸರ್ಜನ್ ಡಾ. ಅದಿಕ್ ಕೆ. ಶೆಟ್ಟಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳಿಗೆ ಒಡಿಯೂರು ಶ್ರೀ ರಚಿಸಿರುವ ‘ತುಳು ಲಿಪಿ ಭಗವದ್ಗೀತೆ’ ವಿತರಿಸಲಾಯಿತು.
ರವಿರಾಜ್ ಶೆಟ್ಟಿ ಒಡಿಯೂರು ತಂಡದಿಂದ ಭಜನಾ ಸಂಕೀರ್ತನೆ ನಡೆಯಿತು. ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡಿದರು.
ಈ ಸಂದರ್ಭದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಮಾಜಿ ಸಚಿವ ಬಿ. ನಾಗರಾಜ ಶೆಟ್ಟಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡ, ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ಉದ್ಯಮಿ ಸುಗ್ಗಿ ಸುಧಾಕರ ಶೆಟ್ಟಿ ಹುಬ್ಬಳ್ಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ತುಳು ಭಾಷೆ ಮುಂದಿನ ದಿನಗಳಲ್ಲಿ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಗೊಳ್ಳಲಿ ಎಂದು ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ ಆಶಯ ವ್ಯಕ್ತಪಡಿಸಿದರು.
ವಾಮಯ ಶೆಟ್ಟಿ ಮುಂಬೈ, ದಾಮೋದರ ಶೆಟ್ಟಿ ಮುಂಬೈ, ಪ್ರಭಾಕರ ಶೆಟ್ಟಿ ಪುಣೆ, ಸಹಕಾರಿ ರತ್ನ ಸುರೇಶ್ ರೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪತ್ರಕರ್ತ ಯಶು ವಿಟ್ಲ ಸ್ವಾಗತಿಸಿದರು. ಮಾತೇಶ್ ಭಂಡಾರಿ ವಂದಿಸಿದರು. ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *