ಮಡಂತ್ಯಾರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕದ ಶ್ರೀ ಅನಂತೇಶ್ವರ ಸ್ವಾಮಿ ಸಮುದಾಯ ಭವನ, ಮಚ್ಚಿನ ಶಾಖೆಯ ವತಿಯಿಂದ ನಡೆಯುತ್ತಿರುವ 56 ದಿನಗಳ ಯೋಗ ತರಗತಿಯ ಅಂಗವಾಗಿ ಸೆ.20ರಂದು ಮಾತೃ ವಂದನೆ ಹಾಗೂ ಮಾತೃಭೋಜನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಮಿತಾ ವಹಿಸಿದ್ದರು. ಮುಖ್ಯ ಮಾತುಗಾರರಾಗಿ ಸಮಿತಿಯ ಜಿಲ್ಲಾ ಪ್ರಾಂತ ಸಂಚಾಲಕ ಹರೀಶ್ ಹಾಗೂ ಮುಖ್ಯ ಅತಿಥಿಯಾಗಿ SDS ಇವೆಂಟ್ ಮ್ಯಾನೇಜ್‌ಮೆಂಟ್‌ನ ಮಾಲಕ ಪ್ರದೀಪ್ ಕುಮಾರ್ ಭಾಗವಹಿಸಿದ್ದರು.
ಮುಖ್ಯ ಮಾತುಗಾರರಾದ ಹರೀಶ್ ಅವರು ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ತಾಯಿಯ ಪಾತ್ರ ಮಹತ್ವದ್ದಾಗಿದ್ದು, ತಾಯಿಯ ಪ್ರೀತಿ, ತ್ಯಾಗ, ಮಮತೆ ಹಾಗೂ ಸಂಸ್ಕಾರವನ್ನು ಸದಾ ಸ್ಮರಿಸಬೇಕು. ಹೆತ್ತವರು ಹಾಗೂ ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದ್ದು, ಮಾತೃ–ಪಿತೃ ಭಕ್ತಿಯೊಂದಿಗೆ ಉತ್ತಮ ಸಂಸ್ಕಾರಯುತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರು, ಯೋಗಪಟುಗಳು ಹಾಗೂ ಸಾರ್ವಜನಿಕರು ಸೇರಿದಂತೆ 202 ಮಂದಿ ಭಾಗವಹಿಸಿದ್ದರು. ಯೋಗಪಟುಗಳು ತಮ್ಮ ಮನೆಗಳಿಂದ ಸಾತ್ವಿಕ ಆಹಾರವನ್ನು ತಯಾರಿಸಿ ತಂದು ಪರಸ್ಪರ ಹಂಚಿಕೊಂಡು ಮಾತೃಭೋಜನ ನಡೆಸಿದರು. ಕೈತುತ್ತಿನ ಮೂಲಕ ಆಹಾರ ವಿತರಿಸುವ ಮೂಲಕ ಕಾರ್ಯಕ್ರಮ ಆತ್ಮೀಯವಾಗಿ ಸಂಪನ್ನಗೊಂಡಿತು.

ಲೋಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ನಿಶಾಲತಾ ಸ್ವಾಗತಿಸಿದರು. ವಿನೋದ ವರದಿ ವಾಚಿಸಿದರು. ಪ್ರಮೀಳಾ ವಂದಿಸಿದರು.
ಮಾತೃ ವಂದನೆ ಹಾಗೂ ಮಾತೃಭೋಜನದ ಮೂಲಕ ತಾಯಿಯ ಮಹತ್ವ, ಹಿರಿಯರನ್ನು ಗೌರವಿಸುವ ಸಂಸ್ಕಾರ ಹಾಗೂ ಪರಸ್ಪರ ಪ್ರೀತಿ ಮತ್ತು ಸಾಮಾಜಿಕ ಬಾಂಧವ್ಯದ ಸಂದೇಶ ಸಾರಲಾಯಿತು.



