ಶ್ರೀಲಂಕಾದ ಹೆರಿಟೇಜ್ ಕೈಟ್ಸ್ ಸಂಸ್ಥೆಯು ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಇಲಾಖೆಗಳ ಸಹಯೋಗದಲ್ಲಿ ಆಗಸ್ಟ್ 1 ಮತ್ತು 2ರಂದು ಮಾತಾರಾ ಬೀಚ್ನಲ್ಲಿ ಸಿರಾಸಾ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿತು.

ಈ ಪ್ರತಿಷ್ಠಿತ ಉತ್ಸವಕ್ಕೆ ಮಂಗಳೂರಿನ ಸರ್ವೇಶ್ ರಾವ್ ನೇತೃತ್ವದ ಹವ್ಯಾಸಿ ಗಾಳಿಪಟ ತಂಡ ‘ಟೀಮ್ ಮಂಗಳೂರು’ಗೆ ವಿಶೇಷ ಆಹ್ವಾನ ಲಭಿಸಿತ್ತು. ತಂಡದ ಸದಸ್ಯರಾದ ವಿ.ಕೆ. ಸನಿಲ್, ದಿನೇಶ್ ಹೊಳ್ಳ ಹಾಗೂ ಪ್ರಾಣೇಶ್ ಕುದ್ರೋಳಿ ಉತ್ಸವದಲ್ಲಿ ಭಾಗವಹಿಸಿ ಭಾರತದ ಪರವಾಗಿ ಗಾಳಿಪಟ ಹಾರಿಸುವ ಮೂಲಕ ಗಮನ ಸೆಳೆದರು.

ವಿವಿಧ ದೇಶಗಳ ನಡುವೆ ಸಾಂಸ್ಕೃತಿಕ ವಿನಿಮಯ, ಸ್ನೇಹ ಮತ್ತು ಪರಸ್ಪರ ಸಹಕಾರವನ್ನು ಉತ್ತೇಜಿಸುವ ಉದ್ದೇಶದಿಂದ ಈ ಉತ್ಸವವನ್ನು ಆಯೋಜಿಸಲಾಗಿತ್ತು. ಸ್ಥಳೀಯ ಕಲಾವಿದರು ತಮ್ಮ ಸಾಂಪ್ರದಾಯಿಕ ಶೈಲಿಯ ಬೃಹತ್ ಗಾತ್ರದ ಗಾಳಿಪಟಗಳನ್ನು ನಿರ್ಮಿಸಿ, ವಿಶಿಷ್ಟ ತಂತ್ರಗಳ ಮೂಲಕ ಆಕಾಶದಲ್ಲಿ ಹಾರಿಸಿದ ದೃಶ್ಯಗಳು ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದವು.

ಇದಕ್ಕೂ ಮುನ್ನ ‘ಟೀಮ್ ಮಂಗಳೂರು’ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಗಾಳಿಪಟಗಳನ್ನು ವಿಶ್ವದ 12 ರಾಷ್ಟ್ರಗಳಲ್ಲಿ ನಡೆದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಗಳಲ್ಲಿ ಹಾರಿಸಿ ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಸಾರುವಲ್ಲಿ ಯಶಸ್ವಿಯಾಗಿದೆ. ಶ್ರೀಲಂಕಾದಲ್ಲಿಯೂ ತಂಡದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದು, ಮಂಗಳೂರು ಹಾಗೂ ಭಾರತದ ಹೆಮ್ಮೆಯನ್ನು ಮತ್ತೊಮ್ಮೆ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಎತ್ತಿಹಿಡಿದಿದೆ.



