ಮಂಗಳೂರು: ನಗರದ ಸಮೀಪದ ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ಗುಣಮಟ್ಟದ ಶಿಕ್ಷಣ ಹಾಗೂ ಉನ್ನತ ಶೈಕ್ಷಣಿಕ ಮಾನದಂಡಗಳನ್ನು ಕಾಯ್ದುಕೊಳ್ಳುವ ತನ್ನ ಬದ್ಧತೆಯನ್ನು ಮತ್ತೊಮ್ಮೆ ಸಾಬೀತು ಪಡಿಸುವಂತೆ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (QCI) ಮಾನ್ಯತೆಯಲ್ಲಿ ಪ್ರತಿಷ್ಠಿತ ‘ಎ’ ಗ್ರೇಡ್ ಪಡೆದು ಮತ್ತೊಂದು ಮಹತ್ವದ ಸಾಧನೆ ಮಾಡಿದೆ.

ಕಾಲೇಜು ಪ್ರಸ್ತುತ ಡಿ.ಫಾರ್ಮ್, ಬಿ.ಫಾರ್ಮ್, ಎಂ.ಫಾರ್ಮ್ ಹಾಗೂ ಫಾರ್ಮ್.ಡಿ ಕೋರ್ಸ್‌ಗಳನ್ನು ನಡೆಸುತ್ತಿದ್ದು, ಔಷಧ ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಹಾಗೂ ಸಮಗ್ರ ಶಿಕ್ಷಣ ನೀಡುತ್ತಿರುವುದಕ್ಕೆ ಈ ಮಾನ್ಯತೆ ದೊರೆತಿದೆ.

ಈ ಸಾಧನೆಯೊಂದಿಗೆ ಪಿ.ಎ. ಕಾಲೇಜ್ ಆಫ್ ಫಾರ್ಮಸಿ ಕರ್ನಾಟಕದಲ್ಲಿ 6ನೇ ಸ್ಥಾನ ಹಾಗೂ ಅಖಿಲ ಭಾರತ ಮಟ್ಟದಲ್ಲಿ 51ನೇ ಸ್ಥಾನ ಪಡೆದುಕೊಂಡಿದೆ. ಕಾಲೇಜಿನ ಶೈಕ್ಷಣಿಕ ಶ್ರೇಷ್ಠತೆ, ಸಂಶೋಧನೆ, ಗುಣಮಟ್ಟದ ಶಿಕ್ಷಣ, ಮೂಲಸೌಕರ್ಯ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯ ಮೇಲಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

QCI ಮಾನ್ಯತೆಯು ಶಿಕ್ಷಣದ ಗುಣಮಟ್ಟ, ಆಡಳಿತ ವ್ಯವಸ್ಥೆ, ಮೂಲಸೌಕರ್ಯ, ಸಂಶೋಧನೆ ಹಾಗೂ ನಿರಂತರ ಗುಣಮಟ್ಟದ ಸುಧಾರಣೆಯಲ್ಲಿ ಉನ್ನತ ಮಟ್ಟದ ಮಾನದಂಡಗಳನ್ನು ಕಾಯ್ದುಕೊಳ್ಳುವ ಸಂಸ್ಥೆಗಳಿಗೆ ನೀಡಲಾಗುವ ಪ್ರತಿಷ್ಠಿತ ಮಾನ್ಯತೆಯಾಗಿದೆ.

ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.




