ಚಿಕ್ಕಮಗಳೂರು: ಮಳೆ ಪ್ರಮಾಣ ಇಳಿಕೆಯಾಗಿದ್ದರೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪ್ರಕೃತಿ ವಿಕೋಪದ ಆತಂಕ ಮುಂದುವರಿದಿದೆ. ಮುಳ್ಳಯ್ಯನಗಿರಿ–ದತ್ತಪೀಠ ಮಾರ್ಗದಲ್ಲಿ ಭಾರೀ ಗಾಳಿಗೆ ಮರಗಳು ಉರುಳುತ್ತಿದ್ದು, ಭೂಕುಸಿತದ ಅಪಾಯವೂ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಎಚ್ಚರಿಕೆಯಿಂದ ಸಂಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಗುರುವಾರ ಚಿಕ್ಕಮಗಳೂರು ತಾಲೂಕಿನ ಚನ್ನಗೋಡನಹಳ್ಳಿ ಸಮೀಪ ಮುಳ್ಳಯ್ಯನಗಿರಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪ್ರವಾಸಿಗನೊಬ್ಬನ ಬೈಕ್ ಮೇಲೆ ಏಕಾಏಕಿ ಮರ ಉರುಳಿದೆ. ಮರದ ತುದಿ ಭಾಗ ಮಾತ್ರ ಬೈಕ್ಗೆ ತಗುಲಿದ ಪರಿಣಾಮ ಸವಾರ ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಭಾರೀ ಗಾಳಿ ಬೀಸುತ್ತಿರುವುದರಿಂದ ಮರಗಳು ಬುಡಸಮೇತ ಉರುಳುತ್ತಿದ್ದು, ರಸ್ತೆ ಸಂಚಾರಕ್ಕೂ ಅಡ್ಡಿಯಾಗುತ್ತಿದೆ. ನಿರಂತರ ಮಳೆಯಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಿರುವ ಕಾರಣ ಮುಳ್ಳಯ್ಯನಗಿರಿ–ದತ್ತಪೀಠ ಮಾರ್ಗದ ಹಲವು ಕಡೆಗಳಲ್ಲಿ ಭೂಕುಸಿತವೂ ಸಂಭವಿಸುತ್ತಿದೆ.

ಈ ಹಿನ್ನೆಲೆಯಲ್ಲಿ ಮುಳ್ಳಯ್ಯನಗಿರಿ ಹಾಗೂ ದತ್ತಪೀಠಕ್ಕೆ ಭೇಟಿ ನೀಡುವ ಪ್ರವಾಸಿಗರು ಮತ್ತು ವಾಹನ ಸವಾರರು ಅಗತ್ಯ ಮುನ್ನೆಚ್ಚರಿಕೆ ವಹಿಸಿ, ಹವಾಮಾನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಸುವಂತೆ ಜಿಲ್ಲಾಡಳಿತ ಸಾರ್ವಜನಿಕರಿಗೆ ಮನವಿ ಮಾಡಿದೆ.



