Breaking
6 Aug 2026, Thu

ಉಪ್ಪಳದಲ್ಲಿ ದುರಂತ: ಬಿಜೆಪಿ ಕಾರ್ಯಕರ್ತ ಸಂದೀಪ್ ಶೆಟ್ಟಿ ಮೃತದೇಹ ಕೆರೆಯಲ್ಲಿ ಪತ್ತೆ

ಉಪ್ಪಳದ ಕೊಂಡೆವೂರಿನ ನಿವಾಸಿ ಹಾಗೂ ಬಿಜೆಪಿ ಕಾರ್ಯಕರ್ತ ಸಂದೀಪ್ ಶೆಟ್ಟಿ ಅಲಿಯಾಸ್ ಅಣ್ಣು (44) ಅವರ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.


ಸೋಮವಾರ ಬೆಳಗ್ಗೆ ಎಂದಿನಂತೆ ಉಪ್ಪಳದ ಶಾರದಾ ನಗರದಲ್ಲಿರುವ ಸೋಡಾ ಕಾರ್ಖಾನೆಗೆ ಕೆಲಸಕ್ಕೆ ತೆರಳಿದ್ದ ಸಂದೀಪ್ ಶೆಟ್ಟಿ ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ಆರಂಭಿಸಿದ್ದರು. ಈ ವೇಳೆ ಮನೆಯ ತೋಟದಲ್ಲಿರುವ ಕೆರೆಯ ಸಮೀಪ ಅವರ ಅಂಗಿ ಪತ್ತೆಯಾಗಿದ್ದು, ಅವರು ಕೆರೆಗೆ ಬಿದ್ದಿರಬಹುದೆಂಬ ಅನುಮಾನ ವ್ಯಕ್ತವಾಗಿತ್ತು.


ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಬಳಿಕ ಸಂದೀಪ್ ಅವರ ಮೃತದೇಹವನ್ನು ಹೊರತೆಗೆದರು.


ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆರೆಯಲ್ಲಿ ಅಳವಡಿಸಿದ್ದ ಮೋಟಾರ್ ಪಂಪಿನ ಫುಟ್ ವಾಲ್ವ್ ದುರಸ್ತಿ ಮಾಡುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಕುರಿತು ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಸಾವಿನ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.


ಸೋಡಾ ಕಾರ್ಖಾನೆಯ ಉದ್ಯೋಗಿಯಾಗಿದ್ದ ಸಂದೀಪ್ ಶೆಟ್ಟಿ ಸ್ಥಳೀಯ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದರು. ಅವರು ಬಿಜೆಪಿಯ 81ನೇ ಬೂತ್ನ ಸಕ್ರಿಯ ಕಾರ್ಯಕರ್ತರಾಗಿದ್ದು, ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು.
ಸಂದೀಪ್ ಶೆಟ್ಟಿ ಅವರ ನಿಧನಕ್ಕೆ ಬಿಜೆಪಿ ಮುಖಂಡರು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಅವರ ಸಾಮಾಜಿಕ ಸೇವೆಯನ್ನು ಸ್ಮರಿಸಿದ್ದಾರೆ.

Leave a Reply

Your email address will not be published. Required fields are marked *