Breaking
5 Aug 2026, Wed

ಭಾರತ್ ಮಾತಾ ಪೂಜನ ಕಾರ್ಯಕ್ರಮ: ಅಖಂಡ ಭಾರತದ ಸಂಕಲ್ಪಕ್ಕೆ ಕರೆ

ಮಾಣಿ: ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ವತಿಯಿಂದ ಆಗಸ್ಟ್‌ 9ರಂದು ನಡೆಯಲಿರುವ ಅಖಂಡ ಭಾರತ ಸಂಕಲ್ಪ ದಿನಾಚರಣೆ ಅಂಗವಾಗಿ ಬಂಟ್ವಾಳ ತಾಲೂಕಿನ ಅನಂತಾಡಿ ಗ್ರಾಮದ ಬಾಕಿಲದಲ್ಲಿ ಭಾರತ್ ಮಾತಾ ಪೂಜನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ, “ಜಗತ್ತಿನಲ್ಲಿ ಹಿಂದೂಗಳಿಗಾಗಿ ಉಳಿದಿರುವ ಏಕೈಕ ದೇಶ ಭಾರತ. ಎಲ್ಲ ಹಿಂದೂಗಳು ಜಾತಿ-ಪಂಗಡಗಳ ಭೇದ ಮರೆತು ಜಾಗೃತರಾಗಿ ಒಗ್ಗಟ್ಟಿನಿಂದ ನಿಂತಾಗ ಮಾತ್ರ ದೇಶವನ್ನು ಭದ್ರವಾಗಿ ಉಳಿಸಿಕೊಳ್ಳಲು ಸಾಧ್ಯ” ಎಂದು ಹೇಳಿದರು. ಪ್ರಸ್ತುತ ಸವಾಲುಗಳ ಕುರಿತು ವಿವರಿಸಿದ ಅವರು, ಆಗಸ್ಟ್‌ 9ರಂದು ಕಲ್ಲಡ್ಕದಲ್ಲಿ ನಡೆಯುವ ಅಖಂಡ ಭಾರತ ಸಂಕಲ್ಪ ಜಾಥಾವನ್ನು ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಜಯಾನಂದ ಪೆರಾಜೆ ಮಾತನಾಡಿ, “ಪರಕೀಯರ ದಾಳಿಗಳ ಪರಿಣಾಮವಾಗಿ ಭಾರತದ ನೈಜ ಇತಿಹಾಸ ಮರೆಮಾಚಲ್ಪಟ್ಟಿದೆ. ಭಾರತೀಯರು ಜಾತಿಭೇದವನ್ನು ಬದಿಗೊತ್ತಿ ರಾಷ್ಟ್ರೀಯ ಭಾವನೆ ಬೆಳೆಸಿಕೊಂಡರೆ ಜಗತ್ತಿನ ಯಾವ ಶಕ್ತಿಯೂ ಭಾರತಕ್ಕೆ ಸರಿಸಾಟಿಯಾಗಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಆರಂಭದಲ್ಲಿ ಮಹಿಳೆಯರು ಭಾರತ್ ಮಾತೆಗೆ ದೀಪ ಪ್ರಜ್ವಲಿಸಿ ಪುಷ್ಪಾರ್ಚನೆ ಸಲ್ಲಿಸಿದರು. ನಾಗೇಶ್ ಭಂಡಾರಿ ಸ್ವಾಗತಿಸಿ, ಉಮೇಶ್ ಪೂಜಾರಿ ವಂದಿಸಿದರು.

Leave a Reply

Your email address will not be published. Required fields are marked *