Breaking
5 Aug 2026, Wed

ಪಶ್ಚಿಮ ಘಟ್ಟ ಇಎಸ್‌ಎ ಕರಡು ಅಧಿಸೂಚನೆಗೆ ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಿ; ರಾಜ್ಯ ಸರ್ಕಾರ ಜನರ ಪರವಾಗಿ ದೃಢ ನಿಲುವು ತಾಳಬೇಕು: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಕೇಂದ್ರ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜುಲೈ 27ರಂದು ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸುವ ಸಂಬಂಧ ಕರಡು ಅಧಿಸೂಚನೆಯನ್ನು ಪ್ರಕಟಿಸಿದೆ.

ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಘೋಷಿಸುವ ಸಂಬಂಧ ಕೇಂದ್ರ ಸರ್ಕಾರ ಪ್ರಕಟಿಸಿರುವ ಕರಡು ಅಧಿಸೂಚನೆಗೆ ಸಾರ್ವಜನಿಕರು 60 ದಿನಗಳೊಳಗೆ ತಮ್ಮ ಆಕ್ಷೇಪಣೆ, ಸಲಹೆ ಹಾಗೂ ಅಭಿಪ್ರಾಯಗಳನ್ನು ಸಲ್ಲಿಸುವಂತೆ ಶಾಸಕ ಹರೀಶ್ ಪೂಂಜ ಮನವಿ ಮಾಡಿದ್ದಾರೆ.

ಈ ಕರಡು ಅಧಿಸೂಚನೆಯಿಂದ ಬೆಳ್ತಂಗಡಿ ಸೇರಿದಂತೆ ಪಶ್ಚಿಮ ಘಟ್ಟ ವ್ಯಾಪ್ತಿಯ ಗ್ರಾಮಗಳ ಭೂಮಿ, ಕೃಷಿ, ಮನೆ ನಿರ್ಮಾಣ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಜನಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರ ಅಭಿಪ್ರಾಯ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಜ್ಯ ಸರ್ಕಾರವು ಈ ವಿಚಾರವನ್ನು ಕೇವಲ ಕೇಂದ್ರ ಸರ್ಕಾರದ ವಿಷಯ ಎಂದು ಕೈಕಟ್ಟಿ ಕುಳಿತುಕೊಳ್ಳದೆ, ಪಶ್ಚಿಮ ಘಟ್ಟ ವ್ಯಾಪ್ತಿಯ ಜನರ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಜನರ ಪರವಾಗಿ ದೃಢ ನಿಲುವು ತಾಳಿ, ರೈತರು, ಭೂಮಾಲೀಕರು ಹಾಗೂ ಗ್ರಾಮೀಣ ಜನರ ಬದುಕಿಗೆ ಧಕ್ಕೆಯಾಗುವ ಅಂಶಗಳಿದ್ದರೆ ಕೇಂದ್ರ ಸರ್ಕಾರದ ಮುಂದೆ ಸ್ಪಷ್ಟವಾಗಿ ವಿರೋಧಿಸಿ, ಜನರ ಪರವಾಗಿ ಕೇಂದ್ರ ಸರ್ಕಾರದ ಮುಂದೆ ಬಲವಾದ ಆಕ್ಷೇಪಣೆ ಸಲ್ಲಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮೇಲಿದೆ ಎಂದು ಒತ್ತಾಯಿಸಿದ್ದಾರೆ.

ಈಗಾಗಲೇ ಸ್ಥಳೀಯರ ಹಕ್ಕುಗಳ ಪರವಾಗಿ ಧ್ವನಿ ಎತ್ತಿರುವುದಾಗಿ ತಿಳಿಸಿರುವ ಹರೀಶ್ ಪೂಂಜ, ಮುಂದೆಯೂ ಜನವಿರೋಧಿ ಕ್ರಮಗಳನ್ನು ವಿರೋಧಿಸುವುದಾಗಿ ಹೇಳಿದ್ದಾರೆ. ಈ ವಿಷಯದಲ್ಲಿ ರಾಜ್ಯ ಸರ್ಕಾರವು ಕೂಡ ಪಕ್ಷಾತೀತವಾಗಿ ಜನರ ಪರವಾಗಿ ನಿಲ್ಲಬೇಕು ಹಾಗೂ ಕರಡು ಅಧಿಸೂಚನೆಯಲ್ಲಿರುವ ಜನವಿರೋಧಿ ಅಂಶಗಳನ್ನು ಕೈಬಿಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ತಿಳಿಸಿದ್ದಾರೆ.

ಆದ್ದರಿಂದ ಕರಡು ಅಧಿಸೂಚನೆಯ ಕುರಿತು ಸಾರ್ವಜನಿಕರು ತಮ್ಮ ಆಕ್ಷೇಪಣೆಗಳನ್ನು, ಸಲಹೆಗಳನ್ನು ಹಾಗೂ ಅಭಿಪ್ರಾಯಗಳನ್ನು ಜುಲೈ 27ರಿಂದ 60 ದಿನಗಳೊಳಗೆ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಲಿಖಿತವಾಗಿ ಅಥವಾ ಇ-ಮೇಲ್ ಮೂಲಕ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.

ವಿಳಾಸ:
ಕಾರ್ಯದರ್ಶಿಗಳು,
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ,
ಇಂದಿರಾ ಪರಿಸರ ಭವನ, ಜೋರ್‌ಬಾಗ್, ನವದೆಹಲಿ – 110003.
ಇ-ಮೇಲ್: esz-mef@nic.in

Leave a Reply

Your email address will not be published. Required fields are marked *