Breaking
19 Sep 2026, Sat

ಉದ್ಯಾವರದಲ್ಲಿ ಮದ್ಯದ ಅಮಲಿನಲ್ಲಿ ಟ್ರಕ್ ಚಾಲನೆ; ಚಾಲಕ ಬಂಧನ

ಉಡುಪಿ: ಕೇರಳಕ್ಕೆ ಸಕ್ಕರೆ ಸಾಗಿಸುತ್ತಿದ್ದ ಟ್ರಕ್‌ವೊಂದು ಮದ್ಯದ ಅಮಲಿನಲ್ಲಿದ್ದ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿ 66ರ ಉದ್ಯಾವರ ಸಮೀಪ ರಸ್ತೆಬದಿಯ ಚರಂಡಿಗೆ ಉರುಳಿದ ಘಟನೆ ಆಗಸ್ಟ್‌ 4ರಂದು ಸಂಜೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಪು ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

ಮಾಹಿತಿಯ ಪ್ರಕಾರ, ಟ್ರಕ್‌ನ್ನು ರಸ್ತೆಬದಿಯಲ್ಲಿ ನಿಲ್ಲಿಸಲು ಚಾಲಕ ಯತ್ನಿಸಿದ್ದಾನೆ. ಆದರೆ ಅತಿಯಾದ ಮದ್ಯದ ಅಮಲಿನಿಂದ ವಾಹನದ ಮೇಲಿನ ನಿಯಂತ್ರಣ ಕಳೆದುಕೊಂಡ ಪರಿಣಾಮ ಟ್ರಕ್ ಚರಂಡಿಗೆ ಉರುಳಿದೆ. ಟ್ರಕ್‌ನ ಚಕ್ರಗಳು ಕೆಸರಿನಲ್ಲಿ ಸಿಲುಕಿದ್ದರಿಂದ ವಾಹನ ಮುಂದೆ ಚಲಿಸದೇ ನಿಂತಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.

ಘಟನೆಯ ಬಳಿಕ ಸ್ಥಳೀಯರು ಸ್ಥಳಕ್ಕೆ ಧಾವಿಸಿ ಚಾಲಕನನ್ನು ತರಾಟೆಗೆ ತೆಗೆದುಕೊಂಡರು. ಚಾಲಕ ಮದ್ಯದ ಅಮಲಿನಲ್ಲಿ ತೂರಾಡುತ್ತಿದ್ದುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳಾಗಿಲ್ಲ.

ಸುದ್ದಿ ತಿಳಿಯುತ್ತಿದ್ದಂತೆ ಕಾಪು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ತನಿಖೆಯಲ್ಲಿ ಚಾಲಕ ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ್ದನ್ನು ದೃಢಪಡಿಸಿದ್ದು, ಆತನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *